ರಾಮನಗರ: `ರಾಸಲೀಲೆ~ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ವಿರುದ್ಧ ಸಿಐಡಿ ಪೊಲೀಸರು ಬುಧವಾರ ರಾಮನಗರ ನ್ಯಾಯಾಲಯದಲ್ಲಿ ಹೆಚ್ಚುವರಿ ಆರೋಪ ಪಟ್ಟಿಯನ್ನು ದಾಖಲಿಸಿದ್ದಾರೆ.
ಈ ಆರೋಪ ಪಟ್ಟಿಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 376ರ ಅಡಿ ಅತ್ಯಾಚಾರ ಮತ್ತು 377ರ ಅಡಿ ಅಸ್ವಾಭಾವಿಕ ಲೈಂಗಿಕ ಸಂಪರ್ಕ ಕುರಿತು ಪ್ರಸ್ತಾಪಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
`ನಿತ್ಯಾನಂದ ಸ್ವಾಮೀಜಿ ಮುಂಬೈ ಮೂಲದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕುರಿತು ಸಿಐಡಿಗೆ ದೂರು ಬಂದಿದೆ. ಈ ಕುರಿತು ಕೆಲ ದಾಖಲೆಗಳೂ ದೊರೆತಿವೆ. ಅದರ ಆಧಾರದ ಮೇಲೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ~ ಎಂದು ಮೂಲಗಳು ಹೇಳಿವೆ.
ನಿತ್ಯಾನಂದ ಅವರ ವಿರುದ್ಧದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮುನಾ ರಾಣಿ ಎಂಬುವರ ವಿರುದ್ಧ ಐಪಿಸಿ 37ರ ಅಡಿ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಿಐಡಿ ದಾಖಲಿಸಿದೆ. ಜಮುನಾ ರಾಣಿ ನಿತ್ಯಾನಂದ ಅವರ ಅನುಯಾಯಿ ಎನ್ನಲಾಗಿದೆ.
ಈ ಮೊದಲು ಸಿಐಡಿ ಪೊಲೀಸರು ನಿತ್ಯಾನಂದ ಸ್ವಾಮೀಜಿ ವಿರುದ್ಧ ವಂಚನೆ (ಐಪಿಸಿ 420), ಸಾಕ್ಷಿನಾಶ, ತಪ್ಪು ಮಾಹಿತಿ (201), ಮೋಸ, ಫೋರ್ಜರಿ (417), ಪಿತೂರಿ (170/ಬಿ), ಕೊಲೆ ಬೆದರಿಕೆ (506) ಕುರಿತು ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.