ರಾಮನಗರ: ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ `ರಾಸಲೀಲೆ~ ಪ್ರಕರಣದ ಪ್ರಮುಖ ಸಾಕ್ಷಿ ಎನ್ನಲಾಗಿರುವ ನಿತ್ಯಧರ್ಮಾನಂದ ಉರುಫ್ ಲೆನಿನ್ ಕುರುಪ್ಪನ್ ಅನ್ನು ಶನಿವಾರ ರಾಮನಗರದ ಜೆಎಂಎಫ್ ನ್ಯಾಯಾಲಯದಲ್ಲಿ ಚೆನ್ನೈ ಪೊಲೀಸರು ಬಾಡಿ ವಾರೆಂಟ್ ಹಿನ್ನೆಲೆಯಲ್ಲಿ ಹಾಜರುಪಡಿಸಿದರು.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ರಂಜಿತಾ ನಗರದ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರಿನ ಅನುಸಾರ ಲೆನಿನ್‌ಗೆ ಬಾಡಿ ವಾರೆಂಟ್ ಜಾರಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಈತನನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
`ನ್ಯಾಯಾಧೀಶರು ಲೆನಿನ್ ಜಾಮೀನು ಅರ್ಜಿಯನ್ನು ಪರಿಶೀಲನೆ ನಡೆಸಿದರು. ಅರ್ಜಿಗೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆ ಸಲ್ಲಿಸುವುದಿದ್ದರೆ ಇದೇ 9ರಂದು ಸಲ್ಲಿಸುವಂತೆ ರಂಜಿತಾ ಪರ ವಕೀಲರಿಗೆ ಸಮಯ ನೀಡಿದರು. ಪ್ರಕರಣದ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ~ ಎಂದು ಲೆನಿನ್ ಪರ ವಕೀಲ ಪುರುಷೋತ್ತಮ್ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಕರಣದ ವಿವರ: ನಿತ್ಯಾನಂದ ಸ್ವಾಮೀಜಿ ಧ್ಯಾನಪೀಠದ ಆಶ್ರಮದಲ್ಲಿ ಇದ್ದ ಸಂದರ್ಭದಲ್ಲಿ ಲೆನಿನ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ನಟಿ ರಂಜಿತಾ ಅತ್ಯಾಚಾರ ಪ್ರಕರಣ (ಭಾರತೀಯ ದಂಡ ಸಂಹಿತೆ ಕಲಂ 376) ದಾಖಲಿಸಿದ್ದರು
. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 376ರ ಬದಲಿಗೆ ಐಪಿಸಿ ಕಲಂ 364, 384, 504 ಮತ್ತು 506 ವಿಚಾರಣೆಗೆ ಅನುವು ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಲೆನಿನ್‌ಗೆ `ಬಾಡಿ ವಾರೆಂಟ್~ ಜಾರಿ ಮಾಡಲಾಗಿತ್ತು. ಇದೀಗ ಚೆನ್ನೈ ಪೊಲೀಸರು ಲೆನಿನ್ ಅನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು~ ಎಂದು ವಕೀಲರು ವಿವರಿಸಿದರು.
ನ್ಯಾಯಾಂಗ ಬಂಧನದಲ್ಲಿರುವ ಲೆನಿನ್ ಅನ್ನು ವಿಚಾರಣೆ ನಂತರ ಪೊಲೀಸರು ಚೆನ್ನೈಗೆ ಕರೆದೊಯ್ದರು.
`ಪ್ರಭಾವ ಬಳಸಿಕೊಂಡು ತಪ್ಪಿಸಿಕೊಳ್ಳಲು ಯತ್ನ~
`ನಿತ್ಯಾನಂದ ಸ್ವಾಮೀಜಿಯ ರಾಸಲೀಲೆ ಕುರಿತು ನಾನು ನೀಡಿರುವ ಸಿ.ಡಿ ಅಸಲಿ ಎಂದು ರಾಜ್ಯದ ಸಿಐಡಿ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಪ್ರಮಾಣೀಕರಿಸಿದೆ. ಆದರೆ ತಾನು ಮಾಡಿರುವ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ನಿತ್ಯಾನಂದ ಸ್ವಾಮೀಜಿ ಈ ದಾಖಲೆಗಳನ್ನು ನಕಲಿ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ~ ಎಂದು ಲೆನಿನ್ ಕುರುಪ್ಪನ್ ಸುದ್ದಿಗಾರರಿಗೆ ತಿಳಿಸಿದರು.
`ನಾನು ಪೊಲೀಸರಿಗೆ ನೀಡಿದ್ದು ರೂಪಾಂತರ ಮಾಡಿದ ಸಿ.ಡಿ ಅಲ್ಲ. ಅದು ಅಸಲಿ ಸಿ.ಡಿ. ಆದರೆ ನಿತ್ಯಾನಂದ ಸ್ವಾಮೀಜಿ ತನ್ನ ಪ್ರಭಾವ ಬಳಸಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ~ ಎಂದು ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.