ADVERTISEMENT

ನಿರ್ಗತಿಕ ಮಕ್ಕಳ ನೆರವಿಗೆ ಧಾವಿಸಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ಬೆಂಗಳೂರು: `ರಾಜಕೀಯ ವ್ಯಕ್ತಿಗಳು, ಸ್ವಯಂಸೇವಾ ಸಂಘಟನೆಗಳು ಬಡ ಮಕ್ಕಳ, ನಿರ್ಗತಿಕ ಮಕ್ಕಳಿಗೆ ನೆರವಿಗೆ ಧಾವಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕು~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ತಿಳಿಸಿದರು.
ಬಾಸ್ಕೊಮನೆ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದೇಶದಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆ, ಸಮರ್ಪಕ ಶಿಕ್ಷಣ ದೊರಕದಿರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಮೂಲಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ~ ಎಂದು ಅವರು ಅಭಿಪ್ರಾಯಪಟ್ಟರು.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ (ಐಸಿಪಿಎಸ್) ನಿರ್ದೇಶಕಿ ಶಶಿಕಲಾ ಶೆಟ್ಟಿ, `ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಎಲ್ಲ ಮಕ್ಕಳಿಗೂ ಶಿಕ್ಷಣ ದೊರಕುವಂತಾಗಬೇಕು~ ಎಂದು ಆಶಿಸಿದರು.  ಬಿಬಿಎಂಪಿ ಸದಸ್ಯ ಬಿ.ವಿ.ಗಣೇಶ್ ಮಾತನಾಡಿ, `ಕಲ್ಮಶ, ದ್ವೇಷ ಇಲ್ಲದ ಮಕ್ಕಳಲ್ಲಿ ಉತ್ತಮ ವ್ಯಕ್ತಿಗಳು, ಸಾಧಕರು ಇರುತ್ತಾರೆ. ಅವರಿಗೆ ಪ್ರೋತ್ಸಾಹ, ಪ್ರೀತಿ ದೊರಕದಿದ್ದರೆ ಈ ವ್ಯಕ್ತಿತ್ವ ಕಣ್ಮರೆಯಾಗುತ್ತದೆ~ ಎಂದರು.

ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಬಾಸ್ಕೊ ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ಪಿ.ಎಸ್ ಮತ್ತಿತರರು ಉಪಸ್ಥಿತರಿದ್ದರು. ಜೀವನದಲ್ಲಿ ಎದುರಾದ ದುಃಖದ ಘಟನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಶಿಕ್ಷಣ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮುನಿಯಪ್ಪ, ತ್ರಿಶಾ, ರಾಜೇಶ್ವರಿ, ಸಂಗೀತ, ವಿನ್ಸೆಂಟ್, ಭೀಮೇಶ್, ಲತಾ ಹಾಗೂ ಭವಾನಿ ಅವರಿಗೆ `ಕೀರ್ತಿಚಕ್ರ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಟ್ಟುನಿಟ್ಟಿನ ಸೂಚನೆ:`ನಗರದ ಕಸವನ್ನು ಕೆರೆಗಳಿಗೆ ಎಸೆದು ನೀರನ್ನು ಕಲುಷಿತ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ತಿಳಿಸಿದರು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, `ತ್ಯಾಜ್ಯವನ್ನು ಕೆರೆಗೆ ಹಾಕುತ್ತಿರುವ ಘಟನೆಗಳು ನಡೆದಿರುವುದು ಗಮನಕ್ಕೆ ಬಂದಿದೆ. ಕೆರೆಯನ್ನು ಡಂಪಿಂಗ್ ಯಾರ್ಡ್ ಮಾಡಲು ಅವಕಾಶ ನೀಡುವುದಿಲ್ಲ~ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.