ADVERTISEMENT

ನಿಲುವು ಸ್ಪಷ್ಟಪಡಿಸಿ: ರಾಜ್ಯಕ್ಕೆ ಸುಪ್ರೀಂ ಸೂಚನೆ

ವಕೀಲರು,ಪೊಲೀಸ್,ಮಾಧ್ಯಮ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:55 IST
Last Updated 9 ಏಪ್ರಿಲ್ 2013, 19:55 IST

ನವದೆಹಲಿ: ಕಳೆದ ವರ್ಷದ ಮಾರ್ಚ್ 2ರಂದು ಬೆಂಗಳೂರಿನಲ್ಲಿ ವಕೀಲರು,ಪೊಲೀಸರು ಹಾಗೂ ಮಾಧ್ಯಮದವರ ನಡುವೆ ನಡೆದ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಮನವಿ ಬಂದಿರುವುದರಿಂದ ಈ ಸಂಬಂಧ ಕರ್ನಾಟಕ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಕರ್ನಾಟಕ ಈ ಸಂಬಂಧದ ತನ್ನ ನಿಲುವನ್ನು ಎರಡು ವಾರದೊಳಗಡೆ ಸ್ಪಷ್ಟಪಡಿಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಅಲ್ತಮಸ್ ಕಬಿರ್ ನೇತೃತ್ವದ ಪೀಠ ತಿಳಿಸಿದೆ.

ಘಟನೆಯ ಕುರಿತು ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್‌ನಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ವನ್ನು ಕಳೆದ ವರ್ಷದ ಮಾರ್ಚ್ 19ರಂದೇ ರಚಿಸಲಾಗಿತ್ತಾದರೂ ತಂಡ ತನ್ನ ಕೆಲಸ ಆರಂಭಿಸಿಲ್ಲ ಹಾಗಾಗಿ ಸಿಬಿಐ ತನಿಖೆ ಕೈಗೊಳ್ಳುವಂತೆ ಕೋರಿ ವಕೀಲರ ಸಂಘದ ಪರವಾಗಿ ಹಾಜರಾದ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ ಅರ್ಜಿ ಸಲ್ಲಿಸಿರುವುದರಿಂದ ಕೋರ್ಟ್ ಈ ಸೂಚನೆ ನೀಡಿದೆ.

ವಿಶೇಷ ತನಿಖಾ ತಂಡದಲ್ಲಿರುವ ಇಬ್ಬರು ಹೆಚ್ಚುವರಿ ಡಿಜಿಪಿಗಳು ತಮ್ಮ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳಗಳಲ್ಲಿ ಕೆಲಸದಲ್ಲಿ ಕಾರ್ಯನಿರತವಾಗಿದ್ದರೆ ಬಿಎಸ್‌ಎಫ್‌ನ ಡಿಐಜಿ ಈ ಕೆಲಸಕ್ಕೆ ಲಭ್ಯರಾಗುತ್ತಿಲ್ಲ. ಘಟನೆಗೆ ಸಂಬಂಧಿಸಿ ತಂಡವು ಸಾಕ್ಷಿಗಳ ಧ್ವನಿಮುದ್ರಣ ಕಾರ್ಯವನ್ನೂ ಆರಂಭಿಸಿಲ್ಲವಾದ್ದರಿಂದ ಸಿಬಿಐ ತನಿಖೆ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವೇಣುಗೋಪಾಲ ಪ್ರತಿಪಾದಿಸಿದರು.

ಆದರೆ ವೇಣುಗೋಪಾಲ ಅವರ ವಾದವನ್ನು ಒಪ್ಪದ ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲ ಕೆ.ವಿ. ವಿಶ್ವನಾಥನ್, ತನಿಖಾ ತಂಡದಲ್ಲಿರುವ ಹೆಚ್ಚುವರಿ ಡಿಜಿಪಿಗಳಾದ ತಮಿಳುನಾಡಿನ ಅಶೋಕಕುಮಾರ್ ಹಾಗೂ ಕೇರಳದ ಮಹೇಶ ಪ್ರಸಾದ್ ಅವರುಗಳು ಈಗಾಗಲೆ ಒಂದು ಬಾರಿ ಸಭೆ ನಡೆಸಿದ್ದಾರೆ. ಆದರೆ ಬಿಎಸ್‌ಎಫ್‌ಗೆ ತನ್ನ ಅಧಿಕಾರಿಯನ್ನು ಈ ಕಾರ್ಯಕ್ಕೆ ನಿಯೋಜಿಸಲು ಕಷ್ಟವಾಗುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದರು.

`ಸಿಬಿಐ ತನಿಖೆ ನಡೆಸಲು ನಿಮಗಿರುವ ತೊಂದರೆಯಾದರೂ ಏನು?. ತನಿಖೆಗೆ ಒಂದೊಂದು ಪ್ರದೇಶದ ಅಧಿಕಾರಿಯನ್ನು ನೇಮಿಸಿದರೆ ಕಷ್ಟವಾಗುತ್ತದೆ. ತನಿಖಾ ತಂಡದಲ್ಲಿರುವವರು ಒಂದೇ ಕಡೆಯವರು ಇರಬೇಕಾಗುತ್ತದೆ' ಎಂದು ವಿಶ್ವನಾಥನ್ ಅವರನ್ನು ಪೀಠ ಪ್ರಶ್ನಿಸಿತು.

ಘಟನೆಗೆ ಸಂಬಂಧಿಸಿದಂತೆ ಒಟ್ಟು 191 ಎಫ್‌ಐಆರ್ ದಾಖಲಿಸಲಾಗಿದ್ದು ಈ ಸಂಬಂಧದ ವಿಚಾರಣೆಯನ್ನು ಕೋರ್ಟ್ ಇದೇ 16ರಂದು ನಡೆಸಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.