ADVERTISEMENT

ನಿವೃತ್ತ ಪೊಲೀಸರ ಅಲೆದಾಟಕ್ಕೆ ಬ್ರೇಕ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಬೆಂಗಳೂರು:  ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿಗೆ ಇಲಾಖೆಯಿಂದ ಬರಬೇಕಾದ ಹಣ ಮತ್ತು ನಿವೃತ್ತಿ ವೇತನ ಕೊಡಿಸಲು ನಗರ ಪೊಲೀಸರು ಜಾರಿಗೆ ತಂದ ಹೊಸ ಪದ್ಧತಿ ಯಶಸ್ವಿಯಾಗಿದ್ದು ಹಣ- ಸೌಲಭ್ಯಕ್ಕಾಗಿ ಸಿಬ್ಬಂದಿಯ ಅಲೆದಾಟಕ್ಕೆ ಬ್ರೇಕ್ ಬಿದ್ದಿದೆ.

ನಿವೃತ್ತಿಗೊಂಡ ಸಿಬ್ಬಂದಿಯ ಜಾಗಕ್ಕೆ ಅರ್ಹ ಸಿಬ್ಬಂದಿಗೆ ಬಡ್ತಿ ನೀಡಲು ಸಹ ಈ ವ್ಯವಸ್ಥೆ ಸಹಕಾರಿಯಾಗಿದ್ದು, ಹುದ್ದೆಗಳು ತಿಂಗಳುಗಟ್ಟಲೆ ಖಾಲಿ ಉಳಿಯುವ ಸಮಸ್ಯೆಯೂ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ನಗರ ಪೊಲೀಸ್ ಸಿಬ್ಬಂದಿಯ ಜೇಷ್ಠತಾ ಪಟ್ಟಿ ತಯಾರಿಸಿರಲಿಲ್ಲ. ಆದ್ದರಿಂದ ಯಾರು ಯಾವಾಗ ನಿವೃತ್ತಿಯಾಗುತ್ತಾರೆ ಎಂದು ಗೊತ್ತಾಗುತ್ತಿರಲಿಲ್ಲ.

ಶಂಕರ್ ಬಿದರಿ ಅವರು ನಗರ ಪೊಲೀಸ್ ಕಮಿಷನರ್ ಆಗಿದ್ದಾಗ ಸಿಬ್ಬಂದಿಯ ಜೇಷ್ಠತಾ ಪಟ್ಟಿ ತಯಾರಿಸಿದ್ದರು. ಒಂದು ತಿಂಗಳ ಅವಧಿಯಲ್ಲಿ ನಿವೃತ್ತಿಯಾಗುವ ಸಿಬ್ಬಂದಿಯ ಪಟ್ಟಿ ತಯಾರಿಸಿ, ತಿಂಗಳ ಮೊದಲ ದಿನ ಅವರಿಗೆಲ್ಲ ಸನ್ಮಾನ ಮಾಡಿ ಇಲಾಖೆಯಿಂದ ಬರಬೇಕಾದ ಹಣವನ್ನು ನೀಡುವ ಸಂಪ್ರದಾಯವನ್ನೂ ಅವರು ಕೆಲ ತಿಂಗಳುಗಳ ಹಿಂದೆ ಆರಂಭಿಸಿದ್ದರು. ನಿವೃತ್ತಿ ವೇತನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ಅಂದೇ ನೀಡುತ್ತಿದ್ದರು.

ಇದಕ್ಕಿಂತ ಮುಖ್ಯವಾದ ಸಂಗತಿ ಎಂದರೆ ನಿವೃತ್ತಿ ಆಗುವ ಸಿಬ್ಬಂದಿಯ ಜಾಗಕ್ಕೆ ಬೇರೆಯವರಿಗೆ ಬಡ್ತಿ ನೀಡುವುದು. ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ಅರ್ಹ ಸಿಬ್ಬಂದಿಗೆ ಅದೇ ಸಮಾರಂಭದಲ್ಲಿ ಬಡ್ತಿಯನ್ನೂ ನೀಡಲಾಗುತ್ತಿತ್ತು. ಜ್ಯೋತಿಪ್ರಕಾಶ್ ಮಿರ್ಜಿ ಅವರು ನೂತನ ಪೊಲೀಸ್ ಕಮಿಷನರ್ ಆಗಿ ಬಂದ ನಂತರವೂ ಈ ಪದ್ಧತಿ ಮುಂದುವರೆದಿದ್ದು ಎಲ್ಲರಿಗೂ ಅನುಕೂಲವಾಗಿದೆ.

`ಜೇಷ್ಠತಾ ಪಟ್ಟಿ ಇಲ್ಲದಿದ್ದಾಗ ಯಾರು ಯಾವಾಗ ನಿವೃತ್ತಿ ಆಗುತ್ತಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆದ್ದರಿಂದ ನಿವೃತ್ತಿಯಾದ ಸಿಬ್ಬಂದಿಯ ಜಾಗಕ್ಕೆ ಬೇರೆ ಸಿಬ್ಬಂದಿಗೆ ಬಡ್ತಿಯನ್ನೂ ನೀಡಲಾಗುತ್ತಿರಲಿಲ್ಲ. ಇದರಿಂದಾಗಿ ಕೆಲ ಹುದ್ದೆಗಳು ತಿಂಗಳುಗಟ್ಟಲೆ ಖಾಲಿ ಇರುತ್ತಿದ್ದವು~ ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ನಿಸಾರ್ ಅಹಮ್ಮದ್ `ಪ್ರಜಾವಾಣಿ~ಗೆ ತಿಳಿಸಿದರು.

`ಆದರೆ ಈಗ ಎಲ್ಲವೂ ಸಲೀಸಾಗಿದೆ. ಸಿಬ್ಬಂದಿ ನಿವೃತ್ತಿಯ ಬಗ್ಗೆ ಮೂರು ತಿಂಗಳ ಮೊದಲೇ ಮಾಹಿತಿ ಕಲೆ ಹಾಕಲಾಗುತ್ತದೆ. ನಿವೃತ್ತಿ ಹೊಂದುವ ಸಿಬ್ಬಂದಿಗೆ ದೊರೆಯಬೇಕಾದ ಹಣ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ತಿಂಗಳ ಮೊದಲ ದಿನವೇ ನೀಡಲಾಗುತ್ತದೆ. ಇದರಿಂದ ಸಿಬ್ಬಂದಿ ಪರದಾಟ ತಪ್ಪಿದೆ. ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಸನ್ಮಾನವನ್ನೂ ಮಾಡಲಾಗುತ್ತದೆ~ ಎಂದರು.

`ಕಾನ್‌ಸ್ಟೇಬಲ್, ಮುಖ್ಯ ಕಾನ್‌ಸ್ಟೇಬಲ್ ಯಾರೇ ಇರಲಿ ಅವರಿಗೆ ಸಕಾಲಕ್ಕೆ ಬಡ್ತಿ ನೀಡದಿದ್ದರೆ ಅವರಿಗೆ ನಷ್ಟವಾಗುತ್ತದೆ. ಬಡ್ತಿ ಸಿಗದಿದ್ದಾಗ ಅವರು ಕೆಲಸದಲ್ಲಿ ನಿರಾಸಕ್ತಿ ತೋರುವ ಸಾಧ್ಯತೆ ಸಹ ಇರುತ್ತದೆ. ನಿಯಮದ ಅನ್ವಯ ಸಿಗಬೇಕಾದ ಬಡ್ತಿ ನೀಡಬೇಕಾದದ್ದು ಕರ್ತವ್ಯವಾಗಿದೆ~ ಎಂದು ನಿಸಾರ್ ಅಹಮ್ಮದ್ ಅಭಿಪ್ರಾಯ       ಪಡುತ್ತಾರೆ.

`ಬಡ್ತಿ ಪಡೆದ ಸಿಬ್ಬಂದಿಗೆ ಸ್ಥಳ ನೀಡಲು ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಹತ್ತು ಮಂದಿ ಎಎಸ್‌ಐಯಿಂದ ಎಸ್‌ಐ ಹುದ್ದೆಗೆ ಆಗಿ ಬಡ್ತಿ ಪಡೆದಿದ್ದಾರೆ ಎಂದರೆ ಖಾಲಿ ಇರುವ ಹತ್ತು ಸ್ಥಾನವನ್ನು ಜೇಷ್ಠತೆ ಆಧಾರದ ಮೇಲೆಯೇ ನೀಡಲಾಗುತ್ತದೆ. ಆದ್ದರಿಂದ ಯಾವ ಸಿಬ್ಬಂದಿಗೂ ಅನ್ಯಾಯವಾಗದು~ ಎಂದು ಅವರು ಹೇಳುತ್ತಾರೆ.  ನಗರ ಪೊಲೀಸ್ ಘಟಕದಲ್ಲಿ ವಿವಿಧ ದರ್ಜೆಯ ಸುಮಾರು ಮೂವತ್ತು ಮಂದಿ ಸಿಬ್ಬಂದಿ ಪ್ರತಿ ತಿಂಗಳು ನಿವೃತ್ತಿ ಆಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.