ADVERTISEMENT

ನಿವೇಶನ ಮಾರಾಟ ದಂಧೆ ಬೇಡ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:40 IST
Last Updated 6 ಜುಲೈ 2012, 19:40 IST

ಬೆಂಗಳೂರು: `ಬಿಡಿಎ ಆಯುಕ್ತರೇ ಈಗಲಾದರೂ ಎಚ್ಚೆತ್ತುಕೊಳ್ಳಿ. ಬಡಾವಣೆ ಅಭಿವೃದ್ಧಿಪಡಿಸಿದ ಕೂಡಲೇ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿ. ಬಳಿಕ ಮತ್ತೊಂದು ಬಡಾವಣೆ ಅಭಿವೃದ್ಧಿಗೆ ಕೈಹಾಕಿ~ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ಶುಕ್ರವಾರ ಬುದ್ಧಿಮಾತು ಹೇಳಿತು.

`ಬಡಾವಣೆಯೊಂದನ್ನು ಅಭಿವೃದ್ಧಿಪಡಿಸಿ ಅದಕ್ಕೆ ರಸ್ತೆ, ವಿದ್ಯುತ್, ನೀರು ಯಾವುದೇ ಮೂಲ ಸೌಕರ್ಯ ನೀಡದೆ ಮತ್ತೊಂದು ಬಡಾವಣೆ ನಿರ್ಮಾಣಕ್ಕೆ ಕೈಹಾಕುವುದು ನಡೆದಿದೆ. 10-15 ವರ್ಷಗಳಾದರೂ ಕಿಂಚಿತ್ತು ಸೌಕರ್ಯ ನೀಡದ ಬಡಾವಣೆಗಳು ಎಷ್ಟು ಇವೆ ಎಂಬುದು ನಿಮಗೆ ಗೊತ್ತೇ? ಅಂಜನಾಪುರ ಬಡಾವಣೆ ನೋಡಿ.

ಗಿಡಮರಗಳಿಂದ ತುಂಬಿ ಅರಣ್ಯದಂತೆ ಕಾಣುತ್ತಿದೆ. ನಿಮ್ಮ ಬಿಡಿಎ ಏನು ಮಾಡುತ್ತಿದೆ. ಆಡಳಿತ ಯಂತ್ರವೇ ಕುಸಿದಿದೆ~ ಎಂದು ಹಾಜರು ಇದ್ದ ಆಯುಕ್ತ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ನುಡಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಹಲವು ಭೂಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಒಂದು ಕೋಟಿ ಜನ: `ನೀವು ಬೆಂಗಳೂರಿನ ಒಂದು ಕೋಟಿ ಜನರಿಗೆ ಉತ್ತರ ಹೇಳಬೇಕಿದೆ. ಬಡಾವಣೆ ನಿರ್ಮಿಸಿ, ನಿವೇಶನಗಳನ್ನಾಗಿ ಪರಿವರ್ತಿಸಿ ಜನರಿಗೆ ಮಾರಾಟ ಮಾಡಿ ಹಣ ಮಾಡುವ ದಂಧೆಗೆ ಬಿಡಿಎ ಇಳಿದಂತೆ ತೋರುತ್ತಿದೆ. ಈ ಪ್ರವೃತ್ತಿ ಬಿಡಿ. ಸಿಬ್ಬಂದಿಗೆ ಸಂಬಳ ನೀಡಲು ನಿಮ್ಮ ಬಳಿ ಹಣ ಇಲ್ಲ. ಜಮೀನು ಸ್ವಾಧೀನ ಪಡಿಸಿಕೊಂಡು ಬಡಾವಣೆಗಳ ನಿರ್ಮಾಣ ಕಾರ್ಯವನ್ನು ಮಾತ್ರ ಯಥೇಚ್ಛವಾಗಿ ಮುಂದುವರಿಸಿದ್ದೀರಿ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.
 

ವಿಶ್ವೇಶ್ವರ, ಕೆಂಪೇಗೌಡ, ಶಿವರಾಮ ಕಾರಂತ ಎಂದೆಲ್ಲ ಹೆಸರಿಟ್ಟು 2000ದಿಂದ ಈಚೆಗೆ ಸುಮಾರು 1.40 ಲಕ್ಷ ನಿವೇಶನ ಮಾಡಿದ್ದೀರಿ. ಸುಖಾಸುಮ್ಮನೆ ಮಹಾನ್ ವ್ಯಕ್ತಿಗಳ ಹೆಸರು ಯಾಕೆ ಇಡುತ್ತೀರಿ? ನಿಮ್ಮ ಈ ಕ್ರಮದಿಂದಾಗಿಯೇ ಎಷ್ಟೋ ಬಡಾವಣೆಗಳಲ್ಲಿ ನಿವೇಶನಗಳು ಮಾರಾಟ ಆಗದೆ ಖಾಲಿ ಉಳಿದಿವೆ. ಆದರೆ ಅದು ಕೂಡ ನಿಮ್ಮ ಗಮನಕ್ಕೆ ಬರುತ್ತಿಲ್ಲ. ಅದನ್ನು ಅಲ್ಲಿಗೇ ಬಿಟ್ಟು ಮತ್ತೊಂದು ಬಡಾವಣೆ ನಿರ್ಮಿಸುವ ಉದ್ದೇಶದ ಹಿಂದೆ ಏನಿದೆ~ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಆಗ ಖರೋಲಾ ಅವರು, `ನಾನು ಬಿಡಿಎ ಆಯುಕ್ತನಾಗಿ ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ~ ಎಂದರು. ಅದಕ್ಕೆ ನ್ಯಾಯಮೂರ್ತಿಗಳು `ಮೂಲ ಸೌಕರ್ಯ ನೀಡುವುದು ತುರ್ತಾಗಿ ಆಗಬೇಕಾದ ಕಾರ್ಯ. ಈ ನಿಟ್ಟಿನಲ್ಲಿ ಶೀಘ್ರ ಕಾರ್ಯಪ್ರವೃತ್ತರಾಗಿ~ ಎಂದರು. ವಿಚಾರಣೆಯನ್ನು ಮುಂದೂಡಲಾಯಿತು.

`ಸಾಮರ್ಥ್ಯಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಕೈದಿಗಳು~

ADVERTISEMENT

ರಾಜ್ಯದಲ್ಲಿನ ಅದರಲ್ಲೂ ಮುಖ್ಯವಾಗಿ ನಗರದ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಹೀನಾಯ ಸ್ಥಿತಿಗತಿ ಬಗ್ಗೆ `ನಿಮ್ಹಾನ್ಸ್~ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನಡೆಸಿರುವ ಅಧ್ಯಯನಗಳ ಅನ್ವಯ ಮುಂದಿನ ಕ್ರಮಕ್ಕೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಅಮಿತ್ ಆನಂದ್ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಬಂದಿಖಾನೆ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದೆ.

`ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಇಡುವ ಸಾಮರ್ಥ್ಯ 2003 ಮಾತ್ರ. ಆದರೆ 5800 ಕೈದಿಗಳನ್ನು ತುಂಬಿಸಲಾಗಿದೆ. ಇವರಲ್ಲಿ ಶೇ 65 ಮಂದಿ ವಿಚಾರಣಾಧೀನ ಕೈದಿಗಳು. ಇದನ್ನು ಗಣನೆಗೆ ತೆಗೆದುಕೊಂಡರೆ, ಸಾಮರ್ಥ್ಯಕ್ಕಿಂತ ಶೇ 248ಕ್ಕೂ ಹೆಚ್ಚು ಮಂದಿ ಕೈದಿಗಳನ್ನು ತುಂಬಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.