ADVERTISEMENT

ನಿವೇಶನ ವಾಪಸ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಬೆಂಗಳೂರು: ಯಲಹಂಕದ ಹೇರೋಹಳ್ಳಿಯ ಮೂಲಕ ಹಾದು ಹೋಗುವ ಹೊರ ವರ್ತುಲ ರಸ್ತೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಂಡಿರುವ 131 ಖಾಲಿ ನಿವೇಶನಗಳನ್ನು ಕೂಡಲೆ ಹಿಂತಿರುಗಿಸಿ, ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಯಲಹಂಕ ಬಡಾವಣೆಯ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎ.ದೇವರಸೆಗೌಡ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಹಕಾರ ಸಂಘ 1992ರಲ್ಲಿ ಯಲಹಂಕದ ಹೇರೋಹಳ್ಳಿಯಲ್ಲಿ 33 ಎಕರೆ ಜಮೀನನ್ನು ಖರೀದಿ ಮಾಡಿ, ಬಡಾವಣೆಯನ್ನು ನಿರ್ಮಾಣ ಮಾಡಿತ್ತು. ಅದರಲ್ಲಿ 440 ಖಾಲಿ ನಿವೇಶನಗಳನ್ನು ಕೆಪಿಟಿಸಿಎಲ್ ನೌಕರರಿಗೆ ನೀಡಲಾಗಿತ್ತು ಎಂದರು.

ನಿವೇಶನ ಪಡೆದಾಗಿನಿಂದ 2012ರ ವರೆಗೆ ಎಲ್ಲರೂ ಕಂದಾಯವನ್ನು ಪಾವತಿ ಮಾಡಿದ್ದಾರೆ. ಆದರೆ ಈ ಬಡಾವಣೆಗೆ ಇಲ್ಲಿಯವರೆಗೆ ನೀರು ಹಾಗೂ ವಿದ್ಯುತ್ ಸಂಪರ್ಕ ದೊರೆಯದ ಕಾರಣ ಯಾರೂ ಸಹ ಕಟ್ಟಡ ನಿರ್ಮಾಣ ಮಾಡಲು ಮುಂದಾಗಲಿಲ್ಲ. 2006ರಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕಾಗಿ 131 ಖಾಲಿ ನಿವೇಶನಗಳನ್ನು ಬಿಡಿಎ ವಶಕ್ಕೆ ತೆಗೆದುಕೊಂಡಿತ್ತು. ಆಗಿನಿಂದ ಇಲ್ಲಿಯವರೆಗೆ ಯಾವ ರಸ್ತೆ ಕಾಮಗಾರಿಯೂ ಅಲ್ಲಿ ಪ್ರಾರಂಭವಾಗಲಿಲ್ಲ. ಜೊತೆಗೆ ನಮಗೆ ನಮ್ಮ ನಿವೇಶನಗಳನ್ನೂ ಹಿಂತಿರುಗಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿಯಿಂದ ನಿವೇಶನಗಳನ್ನು ಕಳೆದುಕೊಂಡಿರುವವರಲ್ಲಿ ಬಹಳ ಮಂದಿ ಈಗ ಕೆಲಸದಿಂದ ನಿವೃತ್ತಿ ಪಡೆದವರಾಗಿದ್ದಾರೆ. ತಮ್ಮ ಜೀವನದ ಸಂಪಾದನೆಯನ್ನೆಲ್ಲಾ ಈ ನಿವೇಶನಗಳ ಮೇಲೆ ಹೂಡಿಕೆ ಮಾಡಿರುವ ಕಾರಣ ಈಗ ಅವರು ಬೀದಿ ಬೀಳುವ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ರಸ್ತೆ ನಿರ್ಮಾಣಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಂಘದ ಸದಸ್ಯೆ ಸಂಧ್ಯಾ ಒತ್ತಾಯಿಸಿದರು.  ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲ್ಲಿದ್ದೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.