ADVERTISEMENT

ನೀಡದ ದಾಖಲೆ: 25ಸಾವಿರ ಪರಿಹಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಬೆಂಗಳೂರು: ಅರ್ಜಿದಾರರೊಬ್ಬರಿಗೆ ಅವರ ಜಮೀನಿನ ದಾಖಲೆ ಪತ್ರ ನೀಡಲು ವಿನಾಕಾರಣ ವಿಳಂಬ ಮಾಡಿದ ಇಂಡಿಯನ್ ಬ್ಯಾಂಕ್ ನ್ಯೂ ತಿಪ್ಪಸಂದ್ರ ಶಾಖೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ. ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಅರ್ಜಿದಾರರಿಗೆ ನೀಡುವಂತೆ ಆದೇಶಿಸಲಾಗಿದೆ.

ಬ್ಯಾಂಕ್ ವಿರುದ್ಧ ಎ.ಎನ್. ರವಿಕುಮಾರ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೇದಿಕೆ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ ಈ ಆದೇಶ ನೀಡಿದೆ. 2007ರಲ್ಲಿ ರವಿಕುಮಾರ್ ಅವರು, ಮಗನ ಶಿಕ್ಷಣಕ್ಕಾಗಿ ಜಮೀನನ್ನು ಒತ್ತೆ ಇಟ್ಟು ಸಾಲ ಪಡೆದುಕೊಂಡಿದ್ದರು. ಆ ಹಣವನ್ನು ಅವರು ಸಂಪೂರ್ಣವಾಗಿ ಹಿಂದಿರುಗಿಸಿದ್ದರು. ಆದರೆ ಅವರು  ಅವಧಿಗೆ ಮುಂಚೆಯೇ ಸಾಲದ ಹಣವನ್ನು ಹಿಂದಿರುಗಿಸಿದ ಹಿನ್ನೆಲೆಯಲ್ಲಿ 22,073 ರೂಪಾಯಿಗಳ `ದಂಡ~ ನೀಡುವಂತೆ ಬ್ಯಾಂಕ್ ಬೇಡಿಕೆ ಒಡ್ಡಿತು.

ಅಲ್ಲಿಯವರೆಗೆ ದಾಖಲೆ ಪತ್ರ ನೀಡುವುದಿಲ್ಲ ಎಂದು ತಿಳಿಸಿತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಬ್ಯಾಂಕ್‌ನ ಓಂಬುಡ್ಸ್‌ಮನ್‌ಗೆ ದೂರು ದಾಖಲಿಸಿದರು. ಇದು ಇತ್ಯರ್ಥಕ್ಕೆ ಬಾಕಿ ಇರುವ ಮಧ್ಯೆಯೇ, ದಂಡದ ಹಣವನ್ನು ಮನ್ನಾ ಮಾಡಲಾಗಿದೆ ಎಂದು ಬ್ಯಾಂಕ್‌ನಿಂದ ಅರ್ಜಿದಾರರಿಗೆ ಪತ್ರ ಬಂತು. ಆದರೆ ದಾಖಲೆ ಪತ್ರ ಮಾತ್ರ ನೀಡಲಿಲ್ಲ.

ವಿನಾಕಾರಣ ದಾಖಲೆ ಪತ್ರ ನೀಡಲು ನಿರಾಕರಿಸಿದ ಬ್ಯಾಂಕ್ ವಿರುದ್ಧ ಅರ್ಜಿದಾರರು ವೇದಿಕೆ ಮೊರೆ ಹೋದರು. ಬ್ಯಾಂಕ್ ಕರ್ತವ್ಯಲೋಪ ಎಸಗಿದೆ ಎಂದು ಅಭಿಪ್ರಾಯ ಪಟ್ಟ ವೇದಿಕೆ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.