ಬೆಂಗಳೂರು: ‘ನೀರು ಕೇಳುವ ನೆಪದಲ್ಲಿ ಮನೆ ಬಳಿ ಬಂದ ಮಹಿಳೆ ಹಾಗೂ ಯುವಕ, ನನ್ನ ಕೈ--ಕಾಲುಗಳನ್ನು ಕಟ್ಟಿ 400 ಗ್ರಾಂ ಚಿನ್ನಾಭರಣ ದೋಚಿದರು’ ಎಂದು ಕವಿತಾ ಎಂಬುವರು ಕುಮಾರಸ್ವಾಮಿ ಲೇಔಟ್ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.
‘ಸಂಜೆ 4 ಗಂಟೆ ಸುಮಾರಿಗೆ ಅತ್ತೆ ಹಾಗೂ ನಾನು ನಡುಮನೆಯಲ್ಲಿ ಮಲಗಿದ್ದೆವು. ಈ ವೇಳೆ ಬಾಗಿಲು ಬಡಿದ ಮಹಿಳೆ, ಕುಡಿಯಲು ನೀರು ಕೇಳಿದಳು. ಆಕೆಯೊಂದಿಗೆ ಒಬ್ಬ ಯುವಕ ಕೂಡ ಇದ್ದ. ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಇಬ್ಬರೂ ನನ್ನನ್ನು ಹಿಂಬಾಲಿಸಿ ಬಂದು ಬಾಯಿಗೆ ಬಟ್ಟೆ ತುರುಕಿದರು. ನಂತರ ಕೈಕಾಲುಗಳನ್ನು ಕಟ್ಟಿ ಚಾಕುವಿನಿಂದ ಬೆದರಿಸಿದರು.
ನಂತರ ಕೋಣೆಗೆ ತೆರಳಿ ಅಲ್ಮೆರಾದಲ್ಲಿದ್ದ 400 ಗ್ರಾಂ ತೂಕದ ಒಡವೆಗಳನ್ನು ದೋಚಿದರು’ ಎಂದು ಕವಿತಾ ದೂರಿನಲ್ಲಿ ಹೇಳಿದ್ದಾರೆ. ಆದರೆ, ಕವಿತಾ ಅತ್ತೆ ಪಾಪಮ್ಮ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ಮಗ ಮಂಜುನಾಥ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಸೊಸೆ ಕವಿತಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾಳೆ.
ಸಂಜೆ 4 ಗಂಟೆಗೆ ನಾನು ಸಹ ಆಕೆಯ ಜತೆಯೇ ಮಲಗಿದ್ದೆ. ಯಾವುದೇ ಕಳ್ಳರು ಮನೆಗೆ ನುಗ್ಗಿಲ್ಲ. ಈಕೆಯೇ ಆಭರಣ ತೆಗೆದುಕೊಂಡು ನಾಟಕವಾಡುತ್ತಿದ್ದಾಳೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
‘ಪ್ರಕರಣ ಸಂಬಂಧ ಕುಟುಂಬ ಸದಸ್ಯರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.