ADVERTISEMENT

ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ
ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ   

ಪೀಣ್ಯ ದಾಸರಹಳ್ಳಿ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಸಾವಿರಾರು ನಾಗರಿಕರು ಖಾಲಿ ಕೊಡಗಳನ್ನು ಹಿಡಿದು ಗುರುವಾರ ಹೆಗ್ಗನಹಳ್ಳಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಒಂದು ವಾರದಿಂದ ಲಕ್ಷ್ಮಣ ನಗರ, ಗಜಾನನ ನಗರ, ಶ್ರೀ ಗಂಧ ನಗರ, ಸಂಜೀವಿನಗರ, ಸಂಕದಕಟ್ಟೆ, ಫ್ರೆಂಡ್ಸ್ ನಗರ, ಮಯೂರ ನಗರ, ಶಿವಾನಂದ ನಗರ, ಮುನೇಶ್ವ ನಗರ, ಪಟಾಕಿ ಗೋಡನ್ ಬಡಾವಣೆಗಳಲ್ಲಿ ನೀರು ಪೂರೈಕೆಯಾಗದೇ ಪರಿತಪಿಸುವಂತಾಗಿದೆ ಎಂದು ನಾಗರಿಕರು ದೂರಿದರು.

ಸುದ್ದಿ ತಿಳಿದು ಸ್ಥಳಕ್ಕೆ ಅಗಮಿಸಿದ ಜಲಮಂಡಳಿ ಮತ್ತು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಕರಾರರು, ‘ದೂರದ  ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನೀರು ಸರಬರಾಜು ಮಾಡುವ ನೀವು ಕೂಗಳತೆ ದೂರದಲ್ಲಿರುವ ನಮ್ಮ ಬಡಾವಣೆಗಳಿಗೆ ನೀರು ಸರಬರಾಜು ಮಾಡದೇ ನಿರ್ಲಕ್ಷ್ಯ ಮಾಡಿದ್ದೀರಿ’ ಎಂದು ಟೀಕಿಸಿದರು. ಸುಂಕದಕಟ್ಟೆ ಬಳಿ ಕಾವೇರಿ ನೀರು ಕೊಳವೆ ಮಾರ್ಗ ಹೋಗಿದ್ದರೂ ನೀರಿನ ಸಮಸ್ಯೆ ಮಾತ್ರ ತಪ್ಪಿಲ್ಲ ಎಂದು ನಾಗರಿಕರು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ಪಾಲಿಕೆ ಸದಸ್ಯ ಗೋವಿಂದೇಗೌಡ ಮಾತನಾಡಿ, ಅಧಿಕಾರಿಗಳು ಅಡಳಿತ ಪಕ್ಷದ ಮುಖಂಡರ ಅಣತಿಯಂತೆ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಗೆ ಮಣಿದ ಜಲಮಂಡಳಿ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಪೈಪ್‌ಲೈನ್‌ನಲ್ಲಿ ವಾಲ್ವ್‌ಗಳಿಗೆ ಮಾಡಿದ್ದ ವೆಲ್ಡಿಂಗ್ ಅನ್ನು  ತೆಗೆದುಹಾಕಿದರು. ಮುಖಂಡರಾದ ಚಿಕ್ಕತಿಮ್ಮೇಗೌಡ, ಎಚ್.ಬಿ ಬೋರೇಗೌಡ, ಅಂಜನಪ್ಪ, ಮೂರ್ತಿ, ವರಲಕ್ಷ್ಮಿ, ಸುರೇಶ್. ರೇವಣ್ಣ, ವಕೀಲ ರಾಜಣ್ಣ ಹಾಜರಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.