ಬೆಂಗಳೂರು: ‘ಕಾವೇರಿ 4ನೇ ಹಂತ 2ನೇ ಘಟ್ಟದ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮುಗಿಸಿ ನಿಗದಿತ ಅವಧಿಯೊಳಗೆ ಬೆಂಗಳೂರಿಗೆ ನೀರು ತರಲು ಗುತ್ತಿಗೆದಾರರು ಶ್ರಮಿಸಬೇಕು’ ಎಂದು ಬೆಂಗಳೂರು ಜಲಮಂಡಲಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಕಾವೇರಿ 4ನೆ ಹಂತ 2ನೆ ಘಟ್ಟ ಯೋಜನೆಯಡಿ ಜಂಬು ಸವಾರಿ ದಿಣ್ಣೆ, ಹಾರೊಹಳ್ಳಿ ಹಾಗೂ ತಾತಗುಣಿ ಬಳಿ ನಿರ್ಮಾಣವಾಗುತ್ತಿರುವ ನೆಲಮಟ್ಟದ ಜಲಾಶಯಗಳು ಹಾಗೂ ವಾಜರಹಳ್ಳಿಯಿಂದ ಓ.ಎಂ.ಬಿ.ಆರ್.ವರೆಗೆ ಅಳವಡಿಸಲಾಗುತ್ತಿರುವ 53 ಕಿ.ಮೀ. ಉದ್ದದ ಕೊಳವೆ ಮಾರ್ಗದ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ತಾತಗುಣಿಯಲ್ಲಿ ವಿವಿಧ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
‘ಹಾರೊಹಳ್ಳಿ ಹಾಗೂ ತಾತಗುಣಿಯಲ್ಲಿ ತಲಾ 24 ದಶಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಾಶಯಗಳು ಹಾಗೂ ಜಂಬು ಸವಾರಿ ದಿಣ್ಣೆಯಲ್ಲಿ ನಿರ್ಮಾಣವಾಗುತ್ತಿರುವ 18 ದಶಲಕ್ಷ ಲೀಟರ್ ಸಾಮರ್ಥ್ಯದ ಜಿಎಲ್‌ಆರ್ ಕಾಮಗಾರಿಗಳ ವೇಗ ಚುರುಕುಗೊಳ್ಳಬೇಕು’ ಎಂದು ಅವರು ಹೇಳಿದರು.
ಮರಳು ಪೂರೈಕೆಯಲ್ಲಿ ತೀವ್ರ ಅಭಾವ ಕಂಡುಬಂದಿರುವುದು ಹಾಗೂ ನುರಿತ ಕೆಲಸಗಾರರ ಅಭಾವದಿಂದ ಕಾಮಗಾರಿ ಪೂರ್ಣಗೊಳಿಸುವಲ್ಲಿ ತೊಡಕಾಗಿದ್ದು ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಕಾಮಗಾರಿ ಚುರುಕುಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದರು.
ಕೊಳವೆ ಮಾರ್ಗವನ್ನು ಅಳವಡಿಸುವ ಸಂಬಂಧದಲ್ಲಿ ಎಚ್.ಎಂ.ಟಿ, ಬೆಸ್ಕಾಂ, ಬಿ.ಡಿ.ಎ., ರೈಲ್ವೆ ಮುಂತಾದ ಇಲಾಖೆಗಳಿಂದ ಅನುಮತಿ ಪಡೆಯಲು ವಿಳಂಬವಾಗಿರುವುದನ್ನು ಮುಖ್ಯ ಎಂಜಿನಿಯರ್ ನಾರಾಯಣ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ನಿಗದಿಪಡಿಸಲು ಸೂಚಿಸಿದರು.
ಮಂಡಲಿಯ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಮಾತನಾಡಿ ‘ತೊರೆಕಾಡನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ 500 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಸ್ಕರಣ ಕೇಂದ್ರದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಈ ವರ್ಷದ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಬೇಕಿದೆ’ ಎಂದು ಸೂಚನೆ ನೀಡಿದರು.
ನಗರದ ವಿವಿಧ ಭಾಗಗಳಲ್ಲಿ ಯೋಜನೆಯಡಿ ನಿರ್ಮಾಣವಾಗುತ್ತಿರುವ 7 ನೆಲಮಟ್ಟದ ಜಲಾಶಯಗಳ ಕಾಮಗಾರಿಗಳನ್ನು ನಿಗದಿತ ಅವಧಿಗಿಂತಲೂ ಮೊದಲೇ ಪೂರ್ಣಗೊಳಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.