ADVERTISEMENT

ನೀರಿನ ದರ ಏರಿಕೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ವಿದ್ಯುತ್ ದರ ಏರಿಕೆಯಾಗುವ ಹಿನ್ನೆಲೆಯಲ್ಲಿ ನೀರಿನ ದರವನ್ನು ಕೂಡ ಏರಿಸುವುದು ಅನಿವಾಯ~ ಎಂದು ಬೆಂಗಳೂರು ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ತಿಳಿಸಿದರು.

ಫೆಬ್ರುವರಿಯಲ್ಲಿ ನಡೆಯಲಿರುವ ವಿಶ್ವ ಜಲ ಶೃಂಗಸಭೆ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

`2 ವರ್ಷಗಳಿಂದ ವಿದ್ಯುತ್ ದರ ಏರಿಕೆಯಾಗುತ್ತಲೇ ಇದೆ. ಪ್ರತಿ ಯುನಿಟ್ ವಿದ್ಯುತ್‌ಗೆ ರೂ 3.20  ಇಂದ ರೂ 3.80  ಏರಿಕೆಯಾಗಿದ್ದು ಈಗ ಮತ್ತೆ 88 ಪೈಸೆಯಷ್ಟು ದರ ಏರಿಕೆಯಾಗುತ್ತಿದೆ. ಇದರಿಂದ ಜಲಮಂಡಲಿ ಪ್ರತಿ ತಿಂಗಳು ರೂ 5 ಕೋಟಿಯಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ದರ ಏರಿಕೆಯಿಂದಾಗಿ ಜಲಮಂಡಲಿಯ ಶೇ 75ರಷ್ಟು ಆದಾಯವನ್ನು ವಿದ್ಯುತ್ ನಿಗಮಕ್ಕೆ ತೆರಬೇಕಾದ ಅನಿವಾರ್ಯತೆ ಇದೆ~ ಎಂದರು.

`ಬೆಲೆ ಏರಿಕೆ ಅನಿವಾರ್ಯ ಎಂಬುದು ಸರ್ಕಾರಕ್ಕೂ ಮನದಟ್ಟಾಗಿದೆ. ವಿದ್ಯುತ್ ದರ ಏರಿಕೆ ನಂತರ ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ಚಿಂತಿಸಲಾಗಿದೆ. ದರ ಪರಿಷ್ಕರಣೆ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ~ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು `ದರ ಎಷ್ಟು ಏರಿಸಬೇಕು ಎಂಬ ಬಗ್ಗೆ ಇನ್ನೂ ಚರ್ಚಿಸಿಲ್ಲ. ಒಂದು ದಶಕದಿಂದೀಚೆಗೆ ಸಮಗ್ರವಾಗಿ ದರ ಏರಿಕೆ ಮಾಡಿಲ್ಲ. ಹೊರೆಯಾಗದಂತೆ ದರ ನಿರ್ಧರಿಸಲಾಗುವುದು.

ಹೆಚ್ಚು ನೀರು ಬಳಸುವವರಿಗೆ ಹೆಚ್ಚು ದರ ಹಾಗೂ ಕಡಿಮೆ ನೀರು ಬಳಸುವವರಿಗೆ ಕಡಿಮೆ ದರ ವಿಧಿಸಲು ಚಿಂತಿಸಲಾಗುತ್ತಿದೆ. ಬಹುಶಃ ಒಂದು ತಿಂಗಳಲ್ಲಿ ದರ ಏರಿಕೆಯಾಗಲಿದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.