ADVERTISEMENT

ನೀರಿನ ಸದ್ಬಳಕೆ ಪರಿಣಾಮಕಾರಿ ತಂತ್ರಜ್ಞಾನ ಅಗತ್ಯ: ಮೀನಾ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಬೆಂಗಳೂರು: `ಹವಾಮಾನ ವೈಪರೀತ್ಯ ಮತ್ತು ನೀರಿನ ಕೊರತೆಯು ಕೃಷಿ ಕ್ಷೇತ್ರದ ಪ್ರಮುಖ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ರೈತರು ಮತ್ತು ಸರ್ಕಾರ ಒಟ್ಟಾಗಿ ಚಿಂತಿಸುವ ಅಗತ್ಯವಿದೆ' ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಮತ್ತು ರಫ್ತು ನಿಗಮ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `18 ನೇ ಸಂಸ್ಥಾಪನಾ ದಿನಾಚರಣೆ' ಕಾರ್ಯಕ್ರಮದಲ್ಲಿ  ಮಾತನಾಡಿದರು.

`ಕೃಷಿ ಪದ್ಧತಿಯಲ್ಲಿ ನೀರಿನ ಪರಿಣಾಮಕಾರಿ ಬಳಕೆ ಆಗುತ್ತಿಲ್ಲ. ಇದರಿಂದ ನೀರಿನ ಅಭಾವ ಉಂಟಾಗಿ ಕೃಷಿ ಇಳುವರಿಯಲ್ಲಿ ಇಳಿಮುಖವಾಗಿದೆ. ನೀರಿನಸದ್ಬಳಕೆಗೆ ಪರಿಣಾಮಕಾರಿ ತಂತ್ರಜ್ಞಾನವನ್ನು ಕಂಡುಕೊಳ್ಳಬೇಕಿದೆ. ಕೃಷಿ ಮೂಲಕ ರೈತರ ಆದಾಯ ಹೆಚ್ಚಿಸುವುದು ಸರ್ಕಾರದ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ' ಎಂದರು.

ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಜಿ.ಕೆ.ವಸಂತಕುಮಾರ್, `60 ವರ್ಷಗಳಲ್ಲಿ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ ಬಹುತೇಕ ರೈತರು ಇನ್ನೂ ಸ್ವಾವಲಂಬನೆ ಸಾಧಿಸಿಲ್ಲ. ಕಾಲಕ್ಕೆ ಅನುಗುಣವಾಗಿ ಕೃಷಿ ಪದ್ಧತಿಯಲ್ಲೂ ಬದಲಾವಣೆಯಾಗಬೇಕು' ಎಂದು ಹೇಳಿದರು.

`ಕೃಷಿಯಲ್ಲಿ ಸದಾ ಪ್ರಯೋಗಗಳನ್ನು ಮಾಡುತ್ತಿರುವ ಪ್ರತಿಯೊಬ್ಬ ರೈತ ಕೂಡಾ ವಿಜ್ಞಾನಿ. ರೈತರು ಯಾವುದೇ ಸಹಾಯಧನ ನಂಬಿಕೊಂಡು ಕೃಷಿ ಮಾಡಬಾರದು. ಕೃಷಿಗೆ ನೀರಿನ ಕೊರತೆ ಆಗಲು ರೈತರೇ ಕಾರಣ. ಆಯಾ ಪ್ರದೇಶಕ್ಕೆ ಹೊಂದುವ  ಬೆಳೆಗಳನ್ನು ಬೆಳೆದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಅನ್ನದಾತರು ಗಂಭೀರವಾಗಿ ಯೋಚಿಸಬೇಕು' ಎಂದರು.

ಉತ್ತಮ ದ್ರಾಕ್ಷಿ ಬೆಳೆಗಾರರಾದ ಬಿಜಾಪುರದ ಗುರುಪಾದಪ್ಪ ಶಿವಲಿಂಗಪ್ಪ ಬಾಗಿ, ಆನಂದ ಜೆ. ಜೋಷಿ ಮತ್ತು ಉತ್ತಮ ದಾಳಿಂಬೆ ಬೆಳೆಗಾರರಾದ ಕೊಪ್ಪಳದ ವೀರೇಶ ಶಂಕರಪ್ಪ, ಎಸ್.ಜಗನ್ನಾಥ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.