ADVERTISEMENT

ನೀರು ಪೂರೈಕೆ ವ್ಯತ್ಯಯ: ಜಲಂಡಳಿ ವಿರುದ್ಧ ಧರಣಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಕೃಷ್ಣರಾಜಪುರ: ಕುಡಿಯುವ ನೀರು ಪೂರೈಸುವಲ್ಲಿ ಜಲಮಂಡಳಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಸವನಪುರ ನಿವಾಸಿಗಳು ಸ್ಥಳೀಯ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ, `ನನ್ನ ವಾರ್ಡಿನಲ್ಲಿ 8-10 ತಿಂಗಳಿಂದಲೂ ಅಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಕಾಂಗ್ರೆಸ್‌ನಿಂದ ಆರಿಸಿ ಬಂದಿರುವ ಒಂದೇ ಕಾರಣಕ್ಕಾಗಿ ಅಧಿಕಾರಿಗಳು ಸಹಕರಿಸುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ~ ಎಂದು ದೂರಿದರು.

`ನನ್ನ ಸ್ವಂತ ಖರ್ಚಿನಿಂದ ಸುಮಾರು 18 ಕೊಳವೆ ಬಾವಿಗಳನ್ನು ಕೊರೆಸಿದ್ದೇನೆ. ಅಂತರ್ಜಲಮಟ್ಟ ಕುಸಿತದಿಂದ ಕೆಲವು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕಾವೇರಿ ನೀರು ಪೂರೈಕೆ ಮರೀಚಿಕೆಯಾಗುತ್ತಿದ್ದು, ಕುಡಿಯುವ ನೀರಿಗಾಗಿ ಜನತೆ ಬವಣೆ ಪಡುವಂತಾಗಿದೆ~ ಎಂದು ಜಲಮಂಡಳಿ ಅಧಿಕಾರಿಗಳ ಗಮನಸೆಳೆದರು.

ನಗರಸಭಾ ಮಾಜಿ ಅಧ್ಯಕ್ಷ ಡಿ.ಕೆ. ಮೋಹನ್, ಮಾಜಿ ಸದಸ್ಯ ಕೋದಂಡರಾಮಯ್ಯ, ಮುಖಂಡರಾದ ಚಂದ್ರಯ್ಯ, ಮುನಿಯಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಕೆರೆ ಎಸ್.ನಾರಾಯಣಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ್, ಜಲಮಂಡಳಿ ಎಂಜಿನಿಯರ್ ಶ್ರೀನಿವಾಸರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.