ADVERTISEMENT

ನೌಕರರ ಕಲಾಪ್ರತಿಭೆ ಗುರುತಿಸಲು ಕರೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST
ನೌಕರರ ಕಲಾಪ್ರತಿಭೆ ಗುರುತಿಸಲು ಕರೆ
ನೌಕರರ ಕಲಾಪ್ರತಿಭೆ ಗುರುತಿಸಲು ಕರೆ   

ಬೆಂಗಳೂರು: ‘ಬೆಂಗಳೂರು ಜಲಮಂಡಲಿಯ ಎಂಜಿನಿಯರ್‌ಗಳು ಹಾಗೂ ನೌಕರರ ಪ್ರತಿಭೆ ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸಬೇಕಿದೆ’ ಎಂದು ಬೆಂಗಳೂರು ಜಲಮಂಡಲಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಜಲಮಂಡಲಿಯ ಶಿಂಷಾ ಕಲಾಸಂಘ ಇತ್ತೀಚೆಗೆ ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನೀರು ಪೂರೈಕೆಯಂತಹ ಮಹತ್ತರ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸದಾ ಒತ್ತಡದಲ್ಲಿರುತ್ತಾರೆ. ಸಾಂಸ್ಕೃತಿಕ ಚಟುವಟಿಕೆ ಅವರಲ್ಲಿ ಉತ್ಸಾಹ ತುಂಬಬಲ್ಲವು. ಆದ್ದರಿಂದ ಕಲಾ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದರು.

ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಮಾತನಾಡಿ ‘ಜಲಮಂಡಲಿ ವ್ಯಾಪ್ತಿಯ ಮೂರು ಸಾಂಸ್ಕೃತಿಕ ಕಲಾ ಸಂಘಗಳನ್ನು ಒಗ್ಗೂಡಿಸಿ ಅವರ ಪ್ರತಿಭೆ ಗುರುತಿಸಲು ಈ ವರ್ಷದಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

‘ಈ ಕಲಾ ಸಂಘಗಳಿಂದ ನಾಟಕ ಸ್ಪರ್ಧೆ ಏರ್ಪಡಿಸಿ ಕಲಾವಿದರು ಹಾಗೂ ತಂಡಗಳಿಗೆ ಬಹುಮಾನ ನೀಡಲಾಗುವುದು. ಕಲಾ ಕಾರ್ಯಕ್ರಮಗಳನ್ನು ನಡೆಸಲು ಕಲಾಮಂದಿರದ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ನೌಕರರಾದ ರಂಗ ಕಲಾವಿದ ಶಿವಣ್ಣ ಹಾಗೂ ಯೋಗಪಟು ಆರ್.ರಾಮಮೂರ್ತಿ ಅವರಿಗೆ ಈ ಸಾಲಿನ ಶಿಂಷಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು, ಮುಖ್ಯ ಎಂಜಿನಿಯರ್‌ಗಳಾದ ರಾಮಸ್ವಾಮಿ, ಕೆಂಪರಾಮಯ್ಯ, ನಾರಾಯಣ, ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಅ.ನಾ.ಪ್ರಹ್ಲಾದವರಾವ್, ಕಲಾಸಂಘದ ಅಧ್ಯಕ್ಷ ಆರ್.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.