ADVERTISEMENT

‘ನೌಕರಿ ಡಾಟ್‌ ಕಾಮ್‌ ದತ್ತಾಂಶ ಸುರಕ್ಷಿತ’

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:45 IST
Last Updated 28 ಮಾರ್ಚ್ 2018, 19:45 IST

ಬೆಂಗಳೂರು: ‘ದತ್ತಾಂಶ ಸುರಕ್ಷತೆ ಹಾಗೂ ಅಭ್ಯರ್ಥಿಗಳ ಖಾಸಗಿ ಮಾಹಿತಿ ರಕ್ಷಣೆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸುಧಾರಿತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ಜಾಲತಾಣದಲ್ಲಿರುವ ದತ್ತಾಂಶವೆಲ್ಲ ಸುರಕ್ಷಿತವಾಗಿದೆ’ ಎಂದು ‘ನೌಕರಿ ಡಾಟ್‌ ಕಾಮ್‌’ ವಾಣಿಜ್ಯ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಸುಮಿತ್‌ ಸಿಂಗ್‌ ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ, ‘ನೌಕರಿ.ಕಾಮ್‌ ಸರ್ವರ್‌ಗೆ ಕನ್ನ: ರೆಸ್ಯುಮೆ ಕಳವು’ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಮ್ಮ ಜಾಲತಾಣದ ಸರ್ವರ್‌ ಹ್ಯಾಕ್‌ ಆಗಿಲ್ಲ. ಬದಲಿಗೆ ನಮ್ಮ ಜಾಲತಾಣದಲ್ಲಿರುವ ಕ್ಲಾಸ್‌ (klaus) ಐಟಿ ಸಲ್ಯೂಷನ್ಸ್‌ ಕಂಪನಿಯ ಸಬ್‌ಸ್ಕ್ರೈಬ್ಡ್‌ (ಚಂದಾದಾರ) ಖಾತೆ ಹಾಗೂ ಅದರ ಇ–ಮೇಲ್ ಐಡಿ ಮಾತ್ರ ಹ್ಯಾಕ್‌ ಆಗಿದೆ’ ಎಂದು ತಿಳಿಸಿದ್ದಾರೆ.

‘ನಮ್ಮ ಜಾಲತಾಣದ ಸರ್ವರ್‌ ನಿರ್ವಹಣೆಗೂ ಕ್ಲಾಸ್‌ ಐಟಿ ಸಲ್ಯೂಷನ್ಸ್‌ ಕಂಪನಿಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಸೇವೆಯ ಚಂದಾದಾರರು ಮಾತ್ರ’ ಎಂದಿದ್ದಾರೆ.

ADVERTISEMENT

1 ಲಕ್ಷ ರೆಸ್ಯುಮೆ ಕಳವು: ‘ಕಂಪನಿಯ ಇ–ಮೇಲ್ ಐ.ಡಿ ಹಾಗೂ ನೌಕರಿ ಪೋರ್ಟಲ್‌ನಲ್ಲಿರುವ ನಮ್ಮ ಸಬ್‌ಸ್ಕ್ರೈಬ್ಡ್‌ ಖಾತೆ ಹ್ಯಾಕ್‌ ಆಗಿದೆ. ಅದರಿಂದ 1 ಲಕ್ಷ ಅಭ್ಯರ್ಥಿಗಳ ರೆಸ್ಯುಮೆಗಳು ಕಳವಾಗಿವೆ’ ಎಂದು ‘ಕ್ಲಾಸ್‌ ಐಟಿ ಸಲ್ಯೂಷನ್ಸ್‌’ ಕಂಪನಿ, ಸಿಐಡಿಯ ಸೈಬರ್‌ ವಿಭಾಗಕ್ಕೆ ದೂರು ನೀಡಿದೆ.

‘ನೌಕರಿ ಡಾಟ್‌ ಕಾಮ್‌ಗೆ ಹಣ ಪಾವತಿಸಿ ಸಬ್‌ಸ್ಕ್ರೈಬ್ಡ್‌ ಖಾತೆ ತೆರೆದಿದ್ದೇವೆ. ಆ ಖಾತೆ ಹಾಗೂ ನಮ್ಮ ಕಂಪನಿಯ ‘careers@klausit’ ಇ–ಮೇಲ್‌ ಐಡಿಯನ್ನು ಯಾರೋ ಖದೀಮರು, ಹ್ಯಾಕ್‌ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ದೂರಿನಲ್ಲಿ ಕಂಪನಿಯ ನಿರ್ದೇಶಕಿ ರಾಜಶ್ರೀ ಸಂಪತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.