ADVERTISEMENT

ನ್ಯಾಯಮಂಡಳಿ ಪುನರ್‌ರಚನೆ: ಕುಮಾರಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ಬೆಂಗಳೂರು: `ಕಾವೇರಿ ನ್ಯಾಯಮಂಡಳಿಯನ್ನು ಪುನರ್ ರಚಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ಆಗ್ರಹಪಡಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನ್ಯಾಯಮಂಡಳಿಯ ಅಧ್ಯಕ್ಷ ಎನ್.ಪಿ.ಸಿಂಗ್ ಅವರು ಬಹಳ ಹಿಂದೆಯೇ ರಾಜೀನಾಮೆ ನೀಡಿದ್ದಾರೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೂ ಪ್ರಧಾನಮಂತ್ರಿಗೆ ಪತ್ರ ಬರೆದು ಅಧ್ಯಕ್ಷರಷ್ಟೇ ಅಲ್ಲ, ಇಬ್ಬರು ಸದಸ್ಯರ ಬದಲಾವಣೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಹೊಸ ನ್ಯಾಯಮಂಡಳಿ ರಚನೆ ಆದರೆ ರಾಜ್ಯಕ್ಕೆ ನ್ಯಾಯ ಸಿಗುವ ವಿಶ್ವಾಸ ಇದೆ' ಎಂದರು.

ಕಾವೇರಿ ನ್ಯಾಯಮಂಡಳಿಯು 2007ರಲ್ಲಿ ಐತೀರ್ಪು ನೀಡಿದ ನಂತರ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಬರುವ ಆಗಸ್ಟ್ 6ರಿಂದ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯಲಿದೆ. ಇದೊಂದು ಸೂಕ್ಷ್ಮ ವಿಚಾರ ಎಂಬುದನ್ನು ಅರಿತು ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಸಲಹೆ ಮಾಡಿದರು.

`ಐತೀರ್ಪಿನ ಅನುಸಾರ...' ಎಂಬ ಪದವನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, `ಜಯಲಲಿತಾ ಅವರು ಈ ಅಂಶವನ್ನೇ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರೆ ಏನಾಗಬಹುದು ಎಂಬುದನ್ನು ಸದನಕ್ಕೆ ಬಿಡುತ್ತೇನೆ. ಕರ್ನಾಟಕಕ್ಕೆ ಮಾರಕವಾಗುವ ಹಾಗೆ ಜಯಲಲಿತಾ ನಡೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ರಾಜ್ಯಕ್ಕೆ ಕಷ್ಟ ಆಗಬಹುದು' ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ವಿವಾದ ಕುರಿತು ಕುಮಾರಸ್ವಾಮಿ ಸುದೀರ್ಘವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ದೇವೇಗೌಡರು ಕಾವೇರಿ ಸಲುವಾಗಿ ನಡೆಸಿದ ಹೋರಾಟಗಳ ಬಗ್ಗೆಯೂ ಪ್ರಸ್ತಾಪಿಸಿದರು. ಇದನ್ನು ಸಚಿವ ವಿ.ಶ್ರೀನಿವಾಸ ಪ್ರಸಾದ್ ವಿರೋಧಿಸಿದರು. `ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು ಎಂದು ಆಗ್ರಹಪಡಿಸಿದ್ದರು. ಆದರೆ, ಅವರೇ ಪ್ರಧಾನ ಮಂತ್ರಿಯಾದಾಗ ಏಕೆ ಆ ಬಗ್ಗೆ ಗಮನಹರಿಸಲಿಲ್ಲ' ಎಂದು ಟೀಕಿಸಿದರು.

ಅವರ ಈ ಹೇಳಿಕೆಗೆ ಜೆಡಿಎಸ್ ಸದಸ್ಯರಿಂದ ಪ್ರತಿರೋಧ ವ್ಯಕ್ತವಾಯಿತು. ಕೆಲಕಾಲ ಗದ್ದಲ ಉಂಟಾಯಿತು. `ದೇವೇಗೌಡರು ಕೇವಲ ಕಾವೇರಿ ಸಲುವಾಗಿ ಹೋರಾಟ ನಡೆಸಿಲ್ಲ. ಕೃಷ್ಣಾ ಕೊಳ್ಳದ ಯೋಜನೆಗಳ ಪರವಾಗಿಯೂ ಹೋರಾಟ ನಡೆಸಿದ್ದಾರೆ. ಸತ್ಯ ಗೊತ್ತಿಲ್ಲದೆ ಮಾತನಾಡಬಾರದು' ಎಂದು ಜೆಡಿಎಸ್ ಸದಸ್ಯರು ತಿರುಗೇಟು ನೀಡಿದರು.

ಕುಮಾರಸ್ವಾಮಿ ಮಾತನಾಡಿ, `ದೇವೇಗೌಡರು ಕಾವೇರಿ, ಕೃಷ್ಣಾ ಸಲುವಾಗಿ ಏನು ಮಾಡಿದ್ದಾರೆ ಎಂಬುದಕ್ಕೆ ನಿಮ್ಮಿಂದ ಸರ್ಟಿಫಿಕೇಟ್ ಬೇಕಿಲ್ಲ. ದಾಖಲೆ ತೆಗೆದು ನೋಡಿ, ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ' ಎಂದರು.

ಏರುಧ್ವನಿಯ ಮಾತಿನ ಚಕಮಕಿ ನಡೆಯುತ್ತಿದ್ದಾಗ, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸಚಿವ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಾತನಾಡದಂತೆ ಎಚ್ಚರಿಸಿದರು. ಬಳಿಕ ಅವರೂ ಸುಮ್ಮನಾದರು.

ವಿರೋಧಿಸಲ್ಲ: `ಕೇವಲ ವಿರೋಧಿಸುವುದಕ್ಕೆ ನಾನು ವಿರೋಧಪಕ್ಷದಲ್ಲಿ ಕುಳಿತಿಲ್ಲ. ಸರ್ಕಾರದ ಎಲ್ಲ ಒಳ್ಳೆಯ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಸದಾ ಇರುತ್ತದೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ಕೊಟ್ಟಷ್ಟೇ ರೈತರ ಕಲ್ಯಾಣಕ್ಕೂ ಗಮನ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಜಿಲ್ಲಾಧಿಕಾರಿಗಳ ಬಳಿ ಹಣ ಇದೆ ಎಂದು ಹೇಳುತ್ತಾ ಸುಮ್ಮನಿದ್ದರೆ ಜನ ಕ್ಷಮಿಸುವುದಿಲ್ಲ. ಮೊದಲು ಹಣ ಕೊಟ್ಟು, ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಸಬೇಕು ಎಂದು ಹೇಳಿದರು.

`ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕ ತಲೆತಗ್ಗಿಸುವಂತಾಗಿದೆ' ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ. ಕನಿಷ್ಠ ಅದನ್ನು ನಿರ್ಮೂಲನೆ ಮಾಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಲಿ. ಅದಕ್ಕೆ ಬೇಕಾಗುವ ಬೆಂಬಲ ನೀಡಲಾಗುವುದು ಎಂದರು.

ಕಾವೇರಿಯ ತೀಕ್ಷ್ಣ ತಿರುವು...
ಬೆಂಗಳೂರು:
1989ರ ಮಾತು. ಮೂರು ಟಿಎಂಸಿ ಅಡಿ ಕಾವೇರಿ ನೀರು ಬಿಡುವಂತೆ ಕೇಳಲು ತಮಿಳುನಾಡಿನ ನೀರಾವರಿ ಸಚಿವರು ನಗರಕ್ಕೆ ಬಂದಿದ್ದರು. ಆಗ ವೀರೇಂದ್ರ ಪಾಟೀಲ್ ರಾಜ್ಯದ ಮುಖ್ಯಮಂತ್ರಿ. ಪುಟ್ಟಸ್ವಾಮಿಗೌಡ ನೀರಾವರಿ ಸಚಿವ.

ಕುಮಾರ ಕೃಪಾ ಅತಿಥಿಗೃಹದಲ್ಲಿ ಇದ್ದ ನೀರಾವರಿ ಸಚಿವರನ್ನು ರಾಜ್ಯದ ಮುಖಂಡರು ಭೇಟಿ ಮಾಡಲಿಲ್ಲ. ಮಾರನೇ ದಿನ ತಮಿಳುನಾಡು ಪತ್ರಿಕೆಗಳಲ್ಲಿ ಸಚಿವರು ಕಾದು ಕುಳಿತ ಸುದ್ದಿ ದೊಡ್ಡದಾಗಿ ಪ್ರಕಟ ಆಯಿತು. ಇದನ್ನು ನೋಡಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಕೋಪಗೊಂಡರು.

ADVERTISEMENT

ಬಳಿಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಕಾವೇರಿ ನ್ಯಾಯಮಂಡಳಿ ರಚಿಸಬೇಕೆಂದು ಪಟ್ಟುಹಿಡಿದರು. ಇದು ನ್ಯಾಯಮಂಡಳಿ ರಚನೆಗೆ ಬುನಾದಿಯಾದ ವಿಷಯ ಎಂದು ವಿರೋಧಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.