ADVERTISEMENT

ನ್ಯಾಯಯುತ ಮಾರ್ಗದಿಂದ ಆಸೆಗಳ ಈಡೇರಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:40 IST
Last Updated 7 ಜನವರಿ 2012, 19:40 IST
ನ್ಯಾಯಯುತ ಮಾರ್ಗದಿಂದ ಆಸೆಗಳ ಈಡೇರಿಸಿಕೊಳ್ಳಿ
ನ್ಯಾಯಯುತ ಮಾರ್ಗದಿಂದ ಆಸೆಗಳ ಈಡೇರಿಸಿಕೊಳ್ಳಿ   

ಬೆಂಗಳೂರು:  `ಆಸೆಗಳನ್ನು ನ್ಯಾಯಯುತ ಮಾರ್ಗದ ಮೂಲಕ ಈಡೇರಿಸಿಕೊಳ್ಳಬೇಕೇ ಹೊರತು ಅನೈತಿಕ ಹಾದಿ ತುಳಿಯಬಾರದು~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

 `ಪ್ರಜಾವಾಣಿ~, `ಡೆಕ್ಕನ್ ಹೆರಾಲ್ಡ್~ ಶಾಲಾ ಮಕ್ಕಳು- ಪಿಯುಸಿ ವಿದ್ಯಾರ್ಥಿಗಳಿಗಾಗಿ ನಗರದ ಬಿಷಪ್ ಕಾಟನ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ `ಸೂಪರ್ 30~ ಖ್ಯಾತಿಯ ಗಣಿತ ತಜ್ಞ ಬಿಹಾರದ ಆನಂದ್‌ಕುಮಾರ್ ಅವರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಎಲ್ಲರಿಗೂ ಆಸೆಗಳಿರುತ್ತವೆ. ಆದರೆ ನೈತಿಕ ಮಾರ್ಗದಲ್ಲಿಯೇ ಅವುಗಳನ್ನು ಪೂರೈಸಿಕೊಳ್ಳಬೇಕು. ಆಗ ಅದು ಶಾಶ್ವತವಾಗಿರುತ್ತದೆ. ಕೆಟ್ಟ ಹಾದಿಯ ಮೂಲಕ ಶಾಶ್ವತ ಸುಖ ಪಡೆಯಲು ಸಾಧ್ಯವಾಗದು ಎಂದು ಅವರು ಕಿವಿ ಮಾತು ಹೇಳಿದರು.

ನಾನು ಹತ್ತು ವರ್ಷದವನಿದ್ದಾಗ ಭ್ರಷ್ಟಾಚಾರದಿಂದ ಪಡೆದ ಮೊತ್ತ ಎರಡಂಕಿಯಲ್ಲಿ ಇರುತ್ತಿತ್ತು. ಆದರೆ ದೇಶದ ಬಹು ದೊಡ್ಡ ಹಗರಣವಾದ 2ಜಿ ಸ್ಪೆಕ್ಟ್ರಂನ ಮೊತ್ತ ಒಂದು ಲಕ್ಷ ಎಪ್ಪತ್ತು ಸಾವಿರ ಕೋಟಿ. ಈ ಮಟ್ಟಿಗೆ ಭ್ರಷ್ಟಾಚಾರ ಬೆಳೆದಿದೆ. ಭವಿಷ್ಯವನ್ನು ಎದುರು ನೋಡುತ್ತಿರುವ ಮಕ್ಕಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಂಕಲ್ಪ ಮಾಡಬೇಕು. ಗಣಿತ ತಜ್ಞ ಆನಂದ್‌ಕುಮಾರ್ ಅವರು ಜ್ಞಾನವನ್ನು ಪಸರಿಸುತ್ತಿದ್ದಾರೆ. ಇದೇ ರೀತಿ ಎಲ್ಲ ವಿದ್ಯಾರ್ಥಿಗಳು ಜ್ಞಾನವನ್ನು ಹರಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

`ಮೂವತ್ತು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ ನನಗೆ ಕಾರ್ಯಾಗಾರ ನಡೆಸಿಕೊಡುವಂತೆ ಕರೆ ಬಂದಾಗ ಬಹಳ ಖುಷಿಯಾಯಿತು. ನನಗೆ ಗೊತ್ತಿರುವ ವಿಷಯಗಳನ್ನು ಹೆಚ್ಚಿನ ಜನರಿಗೆ ತಿಳಿಸಬಹುದಲ್ಲ ಎಂದುಕೊಂಡೆ~ ಎಂದು ಅನಂದ್‌ಕುಮಾರ್ ಹೇಳಿದರು.

ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ) ಪ್ರವೇಶ ಪಡೆಯಲು ಅನುಕೂಲವಾಗುವಂತೆ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇನೆ. ಪ್ರತಿ ವರ್ಷ ಮೂವತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂವತ್ತಕ್ಕೆ 26, 27 ಮಂದಿ ಪ್ರತಿ ವರ್ಷ ಐಐಟಿಗೆ ಪ್ರವೇಶ ಪಡೆಯುತ್ತಿದ್ದಾರೆ. 2008ರಲ್ಲಿ ಮೂವತ್ತೂ ಮಂದಿ ಪ್ರವೇಶ ಪಡೆದಿದ್ದರು ಎಂದು ಅವರು ಮಾಹಿತಿ ನೀಡಿದರು.

ಅತಿಥಿಗಳನ್ನು ಸ್ವಾಗತಿಸಿದ `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ ಪತ್ರಿಕೆಯ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮ್ ಕೃಷ್ಣ, `ಪತ್ರಿಕೆಯನ್ನು ಮುದ್ರಿಸಿ ಮಾರಾಟ ಮಾಡುವುದರಲ್ಲಿ ಮಾತ್ರ ನಮಗೆ ನಂಬಿಕೆ ಇಲ್ಲ. ಜನರೊಂದಿಗೆ ಪತ್ರಿಕೆ ಸಂಪರ್ಕ ಸಾಧಿಸಬೇಕು ಎಂಬ ಧ್ಯೇಯದಿಂದ ಮುನ್ನಡೆಯುತ್ತಿದ್ದೇವೆ. ಆದ್ದರಿಂದಲೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ~ ಎಂದರು.ಎಸಿಇ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಧರ, ಬಿಷಪ್ ಕಾಟನ್ ಬಾಲಕರ ಪ್ರೌಢಶಾಲೆಯ ಉಪ ಪ್ರಾಚಾರ್ಯರಾದ ಪ್ರಿಸಿಲ್ಲಾ ಜಾಕೋಬ್, `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ ಉಪ ಪ್ರಧಾನ ವ್ಯವಸ್ಥಾಪಕ ಎ. ರಾಜಶೇಖರ್ ಉಪಸ್ಥಿತರಿದ್ದರು. ಕಾರ್ಯಾಗಾರ ಭಾನುವಾರವೂ ಮುಂದುವರೆಯಲಿದೆ.

ಗಣಿತದ ಕಬ್ಬಿಣದ ಕಡಲೆ ಕರಗಿದಾಗ...
ಬೆಂಗಳೂರು: ಗಣಿತವನ್ನು ಎಲ್ಲರೂ ಕಬ್ಬಿಣದ ಕಡಲೆ ಎನ್ನುತ್ತಾರೆ. ಆದರೆ ಗಣಿತ ತಜ್ಞ ಆನಂದ್‌ಕುಮಾರ್ ಅವರು ಗಣಿತವನ್ನು ಬೋಧಿಸಿದ ಶೈಲಿ, ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದ ರೀತಿ ಸಭಾಂಗಣದಲ್ಲಿದ್ದ ಸುಮಾರು 1200 ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಒಂದೊಂದು ಲೆಕ್ಕ, ಸಮೀಕರಣವನ್ನು ಬಿಡಿಸಿದಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು.

ಸೀದಾ ಸಾದಾ, ಜ್ಞಾನ ಅಗಾಧ: ಆನಂದ್‌ಕುಮಾರ್ ಕೇವಲ ಗಣಿತ ಪಾಂಡಿತ್ಯದಿಂದ ಮಾತ್ರ ವಿದ್ಯಾರ್ಥಿಗಳ ಗಮನ ಸೆಳೆಯಲಿಲ್ಲ. ಬದಲಿಗೆ, ತೀರಾ ಸಾಮಾನ್ಯ ಎನಿಸುತ್ತಿದ್ದ      ಶರ್ಟ್, ಪ್ಯಾಂಟ್, ಶೂ ಧರಿಸಿದ್ದ ಅವರು, ಉಡುಗೆ ತೊಡುಗೆ, ಸರಳತೆಯಿಂದಲೂ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಪ್ತ ಎನಿಸಿದರು.

ಕಾರ್ಯಾಗಾರವನ್ನು ಆರಂಭಿಸಿದ ಅವರು ಮೊದಲು ಹೇಳಿದ್ದೇ `ನನಗೆ ಗಣಿತ ಎಂದರೆ ಇಷ್ಟ ಏಕೆಂದರೆ ಗಣಿತ ಎಂದರೆ ಅದೊಂದು ಅದ್ಭುತ, ಪವಾಡ~ ಎಂದು.

ಹಿಂದಿಯಲ್ಲಿ ಮಾತನಾಡಿದ ಅವರು ಅಗತ್ಯ ಎನಿಸಿದಾಗ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಪಕ್ಕಾ ಬಿಹಾರ ಶೈಲಿಯ ಹಿಂದಿ ಭಾಷೆಯಲ್ಲಿ ಮಾತನಾಡಿದರು. ಸರಿಯಾದ ವಿಧಾನದ ಮೂಲಕ ಗಣಿತ ಕಲಿತರೆ ಸುಲಭವಾಗುತ್ತದೆ. ಗುರಿ ಹೊಂದಿರುವ ವ್ಯಕ್ತಿಯೊಬ್ಬ ಆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರಿ ಮಾರ್ಗದಲ್ಲಿ ಮೊದಲ ಹೆಜ್ಜೆ ಇಡಬೇಕು. ಆಗ ಗುರಿ ಸಾವಿರಾರು ಮೈಲಿ ಇದ್ದರೂ ಸಾಗಬಹುದು. ಯಾವುದೋ ದಾರಿಯಲ್ಲಿ ಗುರಿ ಇಟ್ಟುಕೊಂಡು ಇನ್ಯಾವುದೋ ದಾರಿಯಲ್ಲಿ ಹೆಜ್ಜೆ ಇಟ್ಟಾಗ ನೀವು ಎಷ್ಟು ದೂರ ಸಾಗಿದರೂ ಗುರಿ ಮುಟ್ಟಲಾಗದು ಎಂದು ವ್ಯಾಖ್ಯಾನಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ರಿಕ್ಕಿ ಮತ್ತು ಬೋಲು ಎಂಬ ಪಾತ್ರಗಳನ್ನು ಒಳಗೊಂಡ ರೂಪಕವನ್ನು ಅವರು ಮಂಡಿಸಿ ಕೆಲ ವಿಷಯಗಳನ್ನು ಮಕ್ಕಳು ಸುಲಭವಾಗಿ ಗ್ರಹಿಸುವಂತೆ ಮಾಡಿದ್ದು ವಿಶೇಷ ಎನಿಸಿತು. ರಿಕ್ಕಿ ಶ್ರೀಮಂತರ ಮಗ ಒಳ್ಳೆಯ ಬಟ್ಟೆ, ಬೂಟು, ಟೈ ಧರಿಸಿ ಬೈಕ್‌ನಲ್ಲಿ ಶಾಲೆಗೆ ಬರುತ್ತಾನೆ. ಆದರೆ ಬೋಲು ಬಡ ಕುಟುಂಬದಿಂದ ಬಂದವನು, ಒಳ್ಳೆಯ ಬಟ್ಟೆಯನ್ನು ಆತ ಹಾಕುವುದಿಲ್ಲ. ಸೈಕಲ್‌ನಲ್ಲಿ ಶಾಲೆಗೆ ಬರುತ್ತಾನೆ. ಭಾರತೀಯ ತಾಂತ್ರಿಕ ಸಂಸ್ಥೆಗೆ ಪ್ರವೇಶ ಪಡೆಯಬೇಕು ಎಂದು ನೆನಪಿಸಿಕೊಂಡರೆ ರಿಕ್ಕಿ ಭಯ ಪಡುತ್ತಾನೆ. ಆದರೆ ಬೋಲು ಭಯ ಪಡುವುದಿಲ್ಲ. ಏಕೆಂದರೆ ಆತ ತಾರ್ಕಿಕವಾಗಿ ಯೋಚಿಸಿ ಲೆಕ್ಕ ಬಿಡಿಸುತ್ತಾನೆ. ಲೆಕ್ಕ ಮಾಡುವುದೆಂದರೆ ಆತನಿಗೆ ರೋಮಾಂಚನದ ಸಂಗತಿ. ಆದ್ದರಿಂದ ಲೆಕ್ಕ ಎಂದರೆ ಭಯಪಡುವ ಬದಲು ಅದರ ಬಗ್ಗೆ ಯೋಚಿಸಿ ಬಿಡಿಸಬೇಕು ಎಂದರು. ಬೋಲು ಏಕಿಷ್ಟು ಬುದ್ಧಿವಂತ ಎಂದು ಗೊತ್ತ ಎಂಬ ಪ್ರಶ್ನೆಯನ್ನು ಕೇಳಿದ ಅವರು, `ಏಕೆಂದರೆ ಆತ ನನ್ನ ವಿದ್ಯಾರ್ಥಿ~ ಎಂದು ಚಟಾಕಿ ಹಾರಿಸಿದರು.

`ಆನಂದ್‌ಕುಮಾರ್ ಬಗ್ಗೆ ಕೇಳಿದ್ದೆವು. ಅವರು ಕಾರ್ಯಾಗಾರ ನಡೆಸುತ್ತಾರೆ ಎಂದು ತಿಳಿದಾಗ ಮಗಳನ್ನು ಕಳುಹಿಸಬೇಕು ಎಂದು ನಿರ್ಧರಿಸಿದೆ. ಮೊದಲನೇ ಪಿಯುಸಿ ಓದುತ್ತಿರುವ ಮಗಳು ರಚಿತಾ ಐಐಟಿ ಕನಸು ಕಾಣುತ್ತಿದ್ದಾಳೆ. ಅದಕ್ಕೆ ತಕ್ಕಂತೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾಳೆ. ಈ ಕಾರ್ಯಾಗಾರದಿಂದ ಆಕೆಗೆ ಬಹಳ ಉಪಯೋಗ ಆಗಲಿದೆ. ಗಣಿತದ ಮ್ಯಾಜಿಕ್ ಕಲಿಯಬೇಕು ಎಂದು ಆಕೆ ಇಲ್ಲಿಗೆ ಬಂದಿದ್ದಾಳೆ~ ಎಂದು ಕನಕಪುರ ರಸ್ತೆ ನಿವಾಸಿ ತ್ರಿವೇಣಿ ಹೇಳಿದರು.

`ಬರಿ ಗಣಿತ ಮಾತ್ರವಲ್ಲ ಆನಂದ್ ಅವರ ವ್ಯಕ್ತಿತ್ವವೇ ಆಕರ್ಷಕ. ಪ್ರಥಮ ಪಿಯುಸಿ ಓದುತ್ತಿರುವ ಮಗಳು ಪ್ರಗ್ನ್ಯಾ ರ‌್ಯಾಂಕ್ ವಿದ್ಯಾರ್ಥಿನಿ. ಈ ಕಾರ್ಯಾಗಾರದಿಂದ ಆಕೆಗೆ ಉಪಯೋಗವಾಗಲಿದೆ ಎಂಬ ನಂಬಿಕೆಯಿಂದ ಕರೆದುಕೊಂಡು ಬಂದೆ~ ಎಂದು ಬಸವನಗುಡಿಯ ಗವಿಪುರ ನಿವಾಸಿ ಸುರೇಶ್ ತಿಳಿಸಿದರು.

ಕಾರ್ಯಾಗಾರದಲ್ಲಿ ಭಾಗವಹಿಸಲು ರಾಜ್ಯದ ಮೂರು ಸಾವಿರ ಮಂದಿ ಕರೆ ಮಾಡಿದ್ದರು. ಆದರೆ 1,200 ಮಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕೊನೆ ಗಳಿಗೆಯಲ್ಲಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಯಿತು. ಸಭಾಂಗಣ ತುಂಬಿ ತುಳುಕುತ್ತಿತ್ತು. ಲೆಕ್ಕವನ್ನೆಲ್ಲ ಪಕ್ಕಾ ಮಾಡಿಕೊಂಡ ವಿದ್ಯಾರ್ಥಿಗಳು ಮನೆಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.