ADVERTISEMENT

ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 20:04 IST
Last Updated 28 ಮಾರ್ಚ್ 2018, 20:04 IST

ಬೆಂಗಳೂರು: ‘ಹೈಕೋರ್ಟ್‌ ಆದೇಶವಿದ್ದರೂ ಜಮೀನಿನ ಖಾತೆ ಮಾಡಿಕೊಟ್ಟಿಲ್ಲ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ಹಾಗೂ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ಡಿ.ಆರ್.ಮಂಜುನಾಥ್ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ.

‘ಅರ್ಜಿದಾರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ’ ಎಂಬ ಕಾರಣಕ್ಕೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕರಣವನ್ನು ಕೈಬಿಟ್ಟಿದೆ.

ಖಾತೆ ಮಾಡಿಕೊಟ್ಟ ದಾಖಲೆಗಳನ್ನು ಅರ್ಜಿದಾರರ ಪರ ಹಿರಿಯ ವಕೀಲ ವೈ.ಎಸ್‌.ಸದಾಶಿವ ರೆಡ್ಡಿ ಹಾಗೂ ಎ.ವಿ.ನಿಶಾಂತ್ ಸಲ್ಲಿಸಿದರು.

ADVERTISEMENT

‘ನಮ್ಮ ಹೆಸರಿಗೆ ಖಾತೆ ಮಾಡಿಕೊಟ್ಟಿಲ್ಲ‘ ಎಂದು ದೂರಿ ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ನರಸಿಂಹಯ್ಯ ಹಾಗೂ ಇತರ ಮೂವರು ಸಿವಿಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.

ಮೆಮೊ ಸಲ್ಲಿಕೆ: ಇದೇ ವೇಳೆ ಸರ್ಕಾರದ ಪರ ವಕೀಲ ಟಿ.ಎಲ್.ಕಿರಣ್ ಕುಮಾರ್ ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು.

‘ಹೈಕೋರ್ಟ್ ಆದೇಶದಂತೆ ವಿವಾದಿತ ಜಮೀನಿನ ಖಾತೆಯನ್ನು ಅರ್ಜಿದಾರರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಆದಾಗ್ಯೂ, ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಆದೇಶವನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಿದೆ. ಈ ಅರ್ಜಿ ಇನ್ನೂ ವಿಚಾರಣಾ ಹಂತದಲ್ಲಿದೆ’ ಎಂದು ಮೆಮೊದಲ್ಲಿ ವಿವರಿಸಲಾಗಿದೆ.

‘ವಿವಾದಿತ ಜಮೀನಿನ ಸಂಬಂಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಎಸಗಿರುವ ಆರೋಪಗಳಿವೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ. ಹೀಗಾಗಿ ಜಮೀನಿನ ದಾಖಲೆಗಳ ಬದಲಾವಣೆ ಸುಪ್ರೀಂಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದೂ ಮೆಮೊದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?: ಹೆಸರಘಟ್ಟ ಹೋಬಳಿಯ ಮಾದಪ್ಪನಹಳ್ಳಿಯ ಸರ್ವೇ ನಂ. 62ರಲ್ಲಿ 32 ಎಕರೆ 4 ಗುಂಟೆ ಜಮೀನಿನ ಮಾಲೀಕತ್ವದ ಸಂಬಂಧ ನರಸಿಂಹಯ್ಯ ಹಾಗೂ ಸರ್ಕಾರದ ನಡುವೆ ವ್ಯಾಜ್ಯ ನಡೆಯುತ್ತಿದೆ.

‘ಕೋಟ್ಯಂತರ ಬೆಲೆಬಾಳುವ ಈ ಜಮೀನಿಗೆ ನರಸಿಂಹಯ್ಯ ವಾರಸುದಾರರಲ್ಲ. ನಕಲಿ ದಾಖಲೆ ಸೃಷ್ಟಿಸಲಾಗಿದೆ’ ಎಂಬುದು ಸರ್ಕಾರದ ಆಕ್ಷೇಪ.

‘ಮಾ.28ರಂದು ನಿಮ್ಮ ವಿರುದ್ಧ ಆರೋಪ ನಿಗದಿಗೊಳಿಸಲಾಗುವುದು ಅಂದು ನೀವು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರತಕ್ಕದ್ದು’ ನ್ಯಾಯಪೀಠ ಈ ಹಿಂದಿನ ವಿಚಾರಣೆ ವೇಳೆ ಶಂಕರ್ ಹಾಗೂ ಮಂಜುನಾಥ್ ಅವರಿಗೆ ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.