ADVERTISEMENT

ನ್ಯಾ. ದೇಸಾಯಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಬೆಂಗಳೂರು: ‘ನ್ಯಾಯಮೂರ್ತಿ ಆರ್‌.ಜಿ. ದೇಸಾಯಿ ಅವರು ರಾಜ್ಯ ಗ್ರಾಹಕರ ಆಯೋಗದ ಪ್ರಥಮ ಅಧ್ಯಕ್ಷರಾಗಿ, ರಾಜ್ಯ ನ್ಯಾಯಾಲಯ ಅಧಿಕಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ವಿವಿಧ ವಿಚಾರಣಾ ಆಯೋಗಗಳ ಮುಖ್ಯಸ್ಥರಾಗಿ ಅನು ಪಮ ಸೇವೆ ಸಲ್ಲಿಸಿದ್ದರು’ ಎಂದು ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿ ಡಿ.ಎಚ್‌. ವಘೇಲಾ ಹೇಳಿದರು.

ಇತ್ತೀಚೆಗೆ ನಿಧನರಾದ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾ. ದೇಸಾಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹೈಕೋರ್ಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಾಪುರದಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ದೇಸಾಯಿ ಅವರು ಕೆಲಕಾಲ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ್ದರು. 1965ರಿಂದ ಜಿಲ್ಲಾ ನ್ಯಾಯಾಧೀಶರಾಗಿ ಧಾರ ವಾಡ, ಬಳ್ಳಾರಿ, ಮಂಗಳೂರು, ಗುಲ್ಬರ್ಗ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. 1979 ರ ಜನವರಿ 1ರಿಂದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕರ್ತವ್ಯ ಆರಂಭಿಸಿದರು. 1988ರ ಡಿ. 31 ರಂದು ನಿವೃತ್ತರಾಗಿದ್ದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ, ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.