ಬೆಂಗಳೂರು: ‘ಯಾವುದೇ ವಾದ, ಪಂಥದ ಪಕ್ಷಗಳು ಅಧಿಕಾರಕ್ಕೆ ಬಂದರೂ ಅವು ಸಮಾಜದ ಏಳಿಗೆಗೆ ಚಿಂತಿಸುವ ವಿಶಾಲ ಹೃದಯ ಹೊಂದಿರಬೇಕಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅಭಿಪ್ರಾಯಪಟ್ಟರು.
ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ 88ನೇ ಜನ್ಮದಿನ ಹಾಗೂ ಕಾಗೋಡು ಸತ್ಯಾಗ್ರಹ ಸಂಸ್ಮರಣೆ ಅಂಗವಾಗಿ ಸಂಯುಕ್ತ ಜನತಾದಳ (ಯು) ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಮಾಜವಾದಿ ಚಳವಳಿಯ ಸವಾಲುಗಳು’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವ್ಯಕ್ತಿಯ ಸಬಲೀಕರಣದ ಜತೆಗೆ ಸಮಾಜದ ಸಬಲೀಕರಣವಾಗಬೇಕು. ಎಲ್ಲಾ ವರ್ಗದ ಜನರು ನೆಮ್ಮದಿಯಿಂದ ಬದುಕಬಹುದಾದ ಸಮಾಜ ನಿರ್ಮಾಣವಾಗಬೇಕು. ಅಕ್ಷರ ಕಲಿತ ಅವಿದ್ಯಾವಂತರು ನಡೆಸುತ್ತಿರುವ ಅನ್ಯಾಯಗಳು ನಿಲ್ಲಬೇಕು’ ಎಂದು ಹೇಳಿದರು.
‘ಶಾಂತವೇರಿ ಗೋಪಾಲಗೌಡರು ಅಪರೂಪದಲ್ಲಿ ಅಪರೂಪದ ರಾಜಕಾರಣಿಯಾಗಿದ್ದರು. ನನ್ನಂತೆಯೇ ನನ್ನ ಜನರೂ ಸಶಕ್ತರಾಗಬೇಕು ಎಂಬ ಹಂಬಲದೊಂದಿಗೆ ರಾಜಕಾರಣ ನಡೆಸಿದವರು ಅವರು. ಶಿವಮೊಗ್ಗದ ರೈತರು ಇಂದು ಹೆಚ್ಚು ಜಾಗೃತರಾಗಿದ್ದರೆ ಅದಕ್ಕೆ ಗೋಪಾಲಗೌಡರು ನೀಡಿದ ತಾತ್ವಿಕ ಬೆಂಬಲ ಕಾರಣ’ ಎಂದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಮಾತನಾಡಿ ‘ಬಿಹಾರದಲ್ಲಿ ಅಧಿಕಾರ ಶಕ್ತಿ ಬದಲಾಗುವ ಮೂಲಕ ಸಮಾಜದ ನಿರ್ಗತಿಕರು, ಬಡವರು ರಾಜಕಾರಣದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಸಮಾಜವಾದಿ ನಿಲುವುಗಳಿಂದ ಈ ಬದಲಾವಣೆ ಸಾಧ್ಯವಾಯಿತು. ಜಾತಿಯ ಎಲ್ಲೆಗಳನ್ನು ಮೀರಿ ಜನತೆ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ತಿಳಿಸಿದರು.
ಮಾಜಿ ಶಾಸಕ ಮೈಕಲ್ ಬಿ ಫರ್ನಾಂಡಿಸ್ ಮಾತನಾಡಿ ‘ಅಮೆರಿಕದ ಶೇ 35ರಷ್ಟು ಒಟ್ಟು ಆಂತರಿಕ ಉತ್ಪನ್ನ ಸೇನಾ ಕ್ಷೇತ್ರಕ್ಕೆ ಮೀಸಲಾಗಿದೆ. ಯುದ್ಧ ಮತ್ತು ಧರ್ಮಗಳು ಮನುಕುಲವನ್ನು ನಿಯಂತ್ರಿಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು. ಮಾಜಿ ಸಂಸದ ಡಾ.ವಿ.ವೆಂಕಟೇಶ್, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಿ ಗುಂಡಿ, ರಾಷ್ಟ್ರೀಯ ಯುವ ಜನತಾದಳದ ಅಧ್ಯಕ್ಷ ಗೋವಿಂದ ಯಾದವ್, ರಾಜ್ಯ ಯುವ ಜನತಾದಳದ ಅಧ್ಯಕ್ಷ ಕೆ.ಸಿ.ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.