ADVERTISEMENT

ಪಟಾಕಿಯಿಂದ ವಾಯುಮಾಲಿನ್ಯ: ಆಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ಬೆಂಗಳೂರು: ದೀಪಾವಳಿ ಮುಗಿದ ನಂತರ ಆಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

‘ದೀಪಾವಳಿ ನಂತರ ವಾತಾವರಣದಲ್ಲಿ ಗಾಳಿಯ ಗುಣಮಟ್ಟವೂ ಕುಸಿದಿದೆ.  ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಮಿಶ್ರಿತ ಹೊಗೆ ಗಾಳಿಯಲ್ಲಿ ಸೇರುತ್ತದೆ. ಇದರ ಉಸಿರಾಟದಿಂದ  ಆಸ್ತಮಾ, ಗಂಭೀರ ಶ್ವಾಸಕೋಶ ಕಾಯಿಲೆ (ಸಿಒಪಿಡಿ), ರೈನಟಿಸ್‌ (ನೆಗಡಿ), ಅಲರ್ಜಿ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶ್ವಾಸಕೋಶ ರೋಗಗಳ ತಜ್ಞ ಡಾ.ಹಿರೇಣಪ್ಪ ಉದ್ನೂರ್‌.

‘ಪಟಾಕಿ ಸಿಡಿಸುವುದನ್ನು ನಿಯಂತ್ರಿಸುವ ಅಗತ್ಯವಿದೆ. ಸುಪ್ರೀಂ ಕೋರ್ಟ್‌ ನವದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ ವಿಧಿಸಿದೆ. ಬೆಂಗಳೂರು ನಗರದಲ್ಲೂ ಇಂತಹ ಕ್ರಮ ಕೈಗೊಳ್ಳುವ ಅನಿವಾರ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ದೀಪಾವಳಿ ನಂತರ ಎಲ್ಲ ವಯೋಮಾನದವರಲ್ಲೂ ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ. ಆಸ್ತಮಾ ಮತ್ತು ಶ್ವಾಸಕೋಶ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುವ ಹೊರ ರೋಗಿಗಳ ಸಂಖ್ಯೆ ಶೇ 30ರಷ್ಟು ಹೆಚ್ಚಾಗಿದೆ’ ಎಂದು ಮಣಿಪಾಲ ಆಸ್ಪತ್ರೆಯ ಶ್ವಾಸಕೋಶ ರೋಗಗಳ ತಜ್ಞರಾದ ಡಾ.ಪದ್ಮಾ ಸುಂದರಂ ತಿಳಿಸಿದರು.

‘ಮೊದಲೇ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಪಟಾಕಿಯ ಹೊಗೆ ಇದರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಆಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುವ ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.