ADVERTISEMENT

ಪಡಿತರ ಚೀಟಿ ವಿತರಣೆಗೆ ವಾರದಲ್ಲಿ ಚಾಲನೆ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಕಾರ್ಯಕ್ಕೆ ವಾರದಲ್ಲಿ ಚಾಲನೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ.
 
ಬಡತನ ರೇಖೆಯ ಕೆಳಗಿರುವ ಮತ್ತು ಮೇಲಿರುವ ಕುಟುಂಬಗಳಿಗೆ ಕ್ರಮವಾಗಿ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ವಿತರಿಸಲು ಅಗತ್ಯ ಸಿದ್ಧತೆಗಳನ್ನು ಇಲಾಖೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಅವರು ಪಡಿತರ ಚೀಟಿ ವಿತರಣೆ ಕಾರ್ಯಕ್ಕೆ ವಾರಾಂತ್ಯದಲ್ಲಿ ಅಧಿಕೃತ ಚಾಲನೆ ನೀಡುವ ನಿರೀಕ್ಷೆ ಇದೆ.

ಸಂಬಂಧಪಟ್ಟ ಸ್ಥಳೀಯ ಕಚೇರಿಗಳಿಗೆ ತೆರಳಿ ಬಯೋಮೆಟ್ರಿಕ್ ದಾಖಲೆಗಳನ್ನು ನೀಡುವಂತೆ, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವರಿಗೆ ಎಸ್‌ಎಂಎಸ್ ಮೂಲಕ ಸೂಚಿಸಲಾಗಿದೆ. ಮೊಬೈಲ್ ದೂರವಾಣಿ ಸಂಖ್ಯೆ ನೀಡದ ವ್ಯಕ್ತಿಗಳಿಗೆ ಅಂಚೆ ಅಥವಾ ಇ-ಮೇಲ್ ಮೂಲಕ ಈ ಸೂಚನೆ ನೀಡಲಾಗಿದೆ.

ಆಯ್ದ ಗ್ರಾಮ ಪಂಚಾಯಿತಿಗಳು, ತಾಲ್ಲೂಕು ಕಚೇರಿಗಳು ಮತ್ತು ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಲ್ಲಿ ಬಯೋಮೆಟ್ರಿಕ್ ದಾಖಲೆ ಸ್ವೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ಏಳು ಲಕ್ಷ ಮಂದಿ ಸೇರಿದಂತೆ ರಾಜ್ಯದಾದ್ಯಂತ ಒಟ್ಟು 21 ಲಕ್ಷ ಮಂದಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರು. ತನಗೆ ಬಂದ ಅರ್ಜಿಗಳನ್ನು ಇಲಾಖೆ ತೀವ್ರ ಪರಿಶೀಲನೆಗೆ ಒಳಪಡಿಸಿದೆ. ಅರ್ಜಿದಾರರು ನೀಡಿರುವ ಅಂಚೆ ವಿಳಾಸಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಕಂದಾಯ ನೋಂದಣಿ (ಆರ್‌ಆರ್) ಸಂಖ್ಯೆ ನೀಡುವುದು ಹೊಸ ಪಡಿತರ ಚೀಟಿ ಪಡೆಯಲು ಕಡ್ಡಾಯ.

ಇಲಾಖೆ ರಾಜ್ಯದಲ್ಲಿ ಇದುವರೆಗೆ ಅಂದಾಜು 40 ಲಕ್ಷ ನಕಲಿ ಪಡಿತರ ಚೀಟಿಗಳನ್ನು ಪತ್ತೆಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.