ADVERTISEMENT

ಪತ್ರಕರ್ತರ ಗುಣಮಟ್ಟ ಕುಸಿತ: ವಿಷಾದ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:50 IST
Last Updated 16 ಮಾರ್ಚ್ 2011, 19:50 IST

ಬೆಂಗಳೂರು:  ಕನ್ನಡ ಪತ್ರಿಕೋದ್ಯಮದ ಹಿರಿಮೆಯನ್ನು ಉಳಿಸುವ ಜವಾಬ್ದಾರಿ ಇಂದಿನ ಪತ್ರಕರ್ತರ ಮೇಲಿದೆ ಎಂದು ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮದಲ್ಲಿ ಇಂದು ಅವಸರದ ಪ್ರವೃತ್ತಿ ಇದೆ. ಕಲುಷಿತಗೊಳ್ಳುತ್ತಿರುವ ವಾತಾವರಣದಲ್ಲಿ ಭ್ರಷ್ಟಾಚಾರವೂ ಸೇರಿಕೊಂಡಿದೆ. ಅವಸರದ ಬರವಣಿಗೆಗೆ ಒಗ್ಗಿಕೊಳ್ಳುವ ಮುನ್ನ ಕಿರಿಯ ಪರ್ತಕರ್ತರು ಆಲೋಚನಾ ಶಕ್ತಿಯನ್ನು ಕಳೆದುಕೊಂಡಿರುವುದು ವಿಷಾದನೀಯ ಎಂದು ಅವರು ಹೇಳಿದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ 36 ಹಿರಿಯ/ಕಿರಿಯ ಪತ್ರಕರ್ತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿ ಅಭಿನಂದಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

78 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಲ್ಲ ಪತ್ರಕರ್ತರ ಹಿತ ಕಾಯುವ ಮಾತೃಸಂಸ್ಥೆಯಾಗಿದ್ದು, ಈ ಸಂಘದ ಅಭಿನಂದನೆ ಸ್ವೀಕರಿಸುವುದು ಎಲ್ಲ ಪ್ರಶಸ್ತಿಗಿಂತ ದೊಡ್ಡದು ಎಂದು ಸನ್ಮಾನಿತರ ಪರವಾಗಿ ಮಾತನಾಡಿದ ಪ್ರಜಾವಾಣಿ ಸಹ ಸಂಪಾದಕ ಪದ್ಮರಾಜ ದಂಡಾವತಿ, ಕನ್ನಡ ಪ್ರಭ ಸಂಪಾದಕ ವಿಶ್ವೇಶ್ವರ ಭಟ್, ಶ್ರೀಮತಿ ಕಿರಣ್ಮಯಿ, ತೊ.ಚ.ಅನಂತಸುಬ್ಬರಾವ್ ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಪ್ರೆಸ್ ಇನ್‌ಫಾರ್ಮೆಷನ್ ಬ್ಯೂರೊ ಜಂಟಿ ನಿರ್ದೇಶಕಿ ಶ್ರೀಮತಿ ಪಲ್ಲವಿ ಚಿನ್ಯ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಪತ್ರಕರ್ತರಾದ ಎಚ್.ಎಸ್.ದೊರೆಸ್ವಾಮಿ, ಎಸ್.ವಿ.ಜಯಶೀಲರಾವ್, ಪಿ.ರಾಮಯ್ಯ, ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ್ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎಸ್.ಸುಧೀಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ಮೊದಲಿಯಾರ್ ಸ್ವಾಗತಿಸಿದರು. ಸಿ.ಜಿ.ಲೋಕೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಡಿಬೆಲೆ ರಾಜಣ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.