ADVERTISEMENT

ಪರಮೇಶ್ವರ್‌ಗೆ ಹುದ್ದೆ: ಒತ್ತಡ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 20:10 IST
Last Updated 3 ಜುಲೈ 2013, 20:10 IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವುದನ್ನು ಅವರ ಬೆಂಬಲಿಗರು ಮುಂದುವರಿಸಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಅಂತರ ಇದೆ ಎಂಬುದನ್ನು ಬಿಂಬಿಸಲು ಈ ಪ್ರಯತ್ನವನ್ನು ಬಳಸಿಕೊಳ್ಳುವುದಕ್ಕೂ ಕೆಲವರು ಮುಂದಾಗಿದ್ದಾರೆ.

ಬುಧವಾರ ಬೆಳಿಗ್ಗೆಯೂ ಕೆಲವರು ದಿಗ್ವಿಜಯ್‌ಸಿಂಗ್ ಅವರನ್ನು ಭೇಟಿ ಮಾಡಿದ್ದು, ಇದೇ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸಚಿವರ ಪೈಕಿ ಜನತಾ ಪರಿವಾರದಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕೂಡ ಕಾಂಗ್ರೆಸ್‌ನ ಒಂದು ಗುಂಪಿನ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಮೂಲ ಕಾಂಗ್ರೆಸ್ಸಿಗರ ಹೆಸರಿನಲ್ಲಿ ಸಂಪುಟದ ಸ್ಥಾನ ಪಡೆದ ಹೆಚ್ಚಿನವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರಲ್ಲ ಎಂಬುದನ್ನೂ ಈ ಗುಂಪು ಎತ್ತಿ ತೋರಿಸುತ್ತಿದೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ ಎಂಬುದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಲು ಈ ಗುಂಪು ಪ್ರಯತ್ನ ಆರಂಭಿಸಿದೆ.

ಪಕ್ಷ ಮತ್ತು ಸರ್ಕಾರದ ನಡುವಣ ಸಂಬಂಧ ವೃದ್ಧಿಗಾಗಿ ಸಮನ್ವಯ ಸಮಿತಿ ರಚಿಸುವಂತೆ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ಅವರು ಕೆಲವು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಮಂಗಳವಾರ ನಡೆದ ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ದಿಗ್ವಿಜಯ್ ಸಿಂಗ್ ಕೂಡ ಇದೇ ಇಂಗಿತ ಹೊರಹಾಕಿದ್ದಾರೆ. ಈಗ ಇದೇ ಅವಕಾಶವನ್ನು ಬಳಸಿಕೊಂಡು, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯದ ಕೊರತೆ ಇದೆ ಎಂಬುದನ್ನು ಬಿಂಬಿಸುವುದಕ್ಕೂ ಕೆಪಿಸಿಸಿಯ ಕೆಲವು ಪದಾಧಿಕಾರಿಗಳು ಮುಂದಾಗಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಸಲ್ಲಿಸಲಾದ ಪತ್ರಕ್ಕೆ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಸಹಿ ಮಾಡಿರಲಿಲ್ಲ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್ ಜೊತೆ ಚರ್ಚೆ: `ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಕೆಪಿಸಿಸಿಯ ಕೆಲವು ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು' ಎಂದು ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಅವರು, ಕೆಲಕಾಲ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು `ಸಿದ್ದರಾಮಯ್ಯ ಅವರು ತೀರಾ ಕೆಳಹಂತದಿಂದ ಬೆಳೆದುಬಂದ ನಾಯಕ. ಉತ್ತಮ ಆಡಳಿತ ನೀಡುವ ಶಕ್ತಿ ಅವರಲ್ಲಿ ಇದೆ. ಅವರ ಸರ್ಕಾರದ ಬಗ್ಗೆ ಜನರಲ್ಲಿ ನಿರೀಕ್ಷೆಗಳೂ ದೊಡ್ಡ ಪ್ರಮಾಣದಲ್ಲಿ ಇವೆ. ಅವರು ಉತ್ತಮ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು.

ಲೋಕಸಭಾ ಚುನಾವಣಾ ತಯಾರಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಇರಬೇಕು. ಆ ದಿಸೆಯಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಪಕ್ಷದ ಮುಖಂಡರಿಗೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.