ADVERTISEMENT

ಪರಿಶೀಲನೆಗೆ ಸಮಿತಿ ನೇಮಕ

ಅಪಾರ್ಟ್‌ಮೆಂಟ್‌ಗೆ ಅವಕಾಶ ನೀಡಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:58 IST
Last Updated 14 ಡಿಸೆಂಬರ್ 2012, 19:58 IST

ಬೆಂಗಳೂರು: ನಗರದ ಎಂಎಲ್‌ಎ ಬಡಾವಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಅವಕಾಶ ನೀಡಿದ ಪ್ರಕರಣ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ನೇಮಕ ಮಾಡಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲರು ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದರು.

ಮಾಜಿ ಶಾಸಕಿ ಶಕುಂತಲಾ ಚೌಗಲೆ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಈ ವಿಷಯ ತಿಳಿಸಿದರು.

ಬಿಬಿಎಂಪಿ ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸರ್ಕಾರಿ ವಕೀಲ ವೀರಪ್ಪ ಅವರು ಈ ಸಮಿತಿಯಲ್ಲಿದ್ದಾರೆ ಎಂದು ಅವರು ವಿವರಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ, ಮೂರು ತಿಂಗಳಲ್ಲಿ ವರದಿ ನೀಡಬೇಕು ಎಂದು ಸೂಚಿಸಿತು. ವಿಚಾರಣೆ ಮುಂದೂಡಲಾಗಿದೆ.

ಆದೇಶಕ್ಕೆ ತಡೆ: ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮ ಅವರ ವರ್ಗಾವಣೆ ರದ್ದು ಮಾಡಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ಆದೇಶದಲ್ಲಿನ ಕೆಲವು ಅಂಶಗಳಿಗೆ ಹೈಕೋರ್ಟ್ ತಡೆ ನೀಡಿದೆ.

ಬಿಎಂಟಿಎಫ್‌ಗೆ ಸರ್ಕಾರ ಎಲ್ಲ ರೀತಿಯ ನೆರವನ್ನು ನೀಡಬೇಕು. ಬಿಎಂಟಿಎಫ್‌ನಿಂದ ತನಿಖೆ ಎದುರಿಸುತ್ತಿರುವವರ ಜಾಗದಲ್ಲಿ ಬದಲಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸಿಎಟಿ ನೀಡಿದ್ದ ನಿರ್ದೇಶನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT