ADVERTISEMENT

ಪರಿಷತ್ತಿನ 11 ಸ್ಥಾನಗಳಿಗೆ ಜೂ.11ಕ್ಕೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 20:03 IST
Last Updated 22 ಮೇ 2018, 20:03 IST

ಬೆಂಗಳೂರು: ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಜೂನ್ 11ರಂದು ಚುನಾವಣೆ ನಡೆಯಲಿದೆ.

ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ. ಡಿ.ಎಸ್‌. ವೀರಯ್ಯ, ರಘುನಾಥ್‌ ರಾವ್‌ ಮಲ್ಕಾಪುರೆ, ಎಂ.ಬಿ. ಭಾನು ಪ್ರಕಾಶ್‌, ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ಎಂ.ಆರ್‌. ಸೀತಾರಾಂ, ಮೋಟಮ್ಮ, ಸಯ್ಯದ್‌ ಮುದೀರ್‌, ಕೆ. ಗೋವಿಂದರಾಜ್‌ ಅವರು ಜೂನ್‌ 17 ರಂದು ನಿವೃತ್ತಿ ಆಗಲಿದ್ದಾರೆ.

ಹೆಬ್ಬಾಳ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್‌
ಬೈರತಿ ಸುರೇಶ್‌ ಪರಿಷತ್‌ ಸದಸ್ಯತ್ವಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಕೊಡದಿರುವುದನ್ನು ಪ್ರತಿಭಟಿಸಿ ಸೋಮಣ್ಣ ಬೇವಿನಮರದ ಮೇಲ್ಮನೆ ಸದಸ್ಯತ್ವ ತ್ಯಜಿಸಿದ್ದಾರೆ. ಇವರ ಅವಧಿಯೂ ಅಂದೇ ಮುಗಿಯುವುದಿತ್ತು.

ADVERTISEMENT

ಹೊಸದಾಗಿ ರಚನೆ ಆಗಿರುವ 15ನೇ ವಿಧಾನಸಭೆಯಲ್ಲಿ ಬಿಜೆಪಿಯ 104, ಕಾಂಗ್ರೆಸ್‌ನ 78, ಜೆಡಿಎಸ್‌ನ 37 ಹಾಗೂ ಇಬ್ಬರು ಪಕ್ಷೇತರರೂ ಸೇರಿದಂತೆ 221 ಸದಸ್ಯರಿದ್ದಾರೆ. ಜಯನಗರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿರುವ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಯಿಂದ ಖಾಲಿ ಆಗಿರುವ ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಬೇಕಿದೆ.

ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ –ಜೆಡಿಎಸ್‌ ಮೈತ್ರಿ ಕೂಟ ಹಾಗೂ ಪಕ್ಷೇತರರು ಸೇರಿ ಆರು, ಬಿಜೆಪಿ ಐದು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಪ್ರತಿ ಅಭ್ಯರ್ಥಿ ಗೆಲ್ಲುವುದಕ್ಕೆ 22 ಮತಗಳ ಅಗತ್ಯವಿದೆ.

ಚುನಾವಣೆ ವೇಳಾಪಟ್ಟಿ

ಅಧಿಸೂಚನೆ ಪ್ರಕಟಣೆ;ಮೇ 24(ಗುರುವಾರ)

ನಾಮ‍ಪತ್ರ ಸಲ್ಲಿಕೆಗೆ ಕೊನೆ ದಿನ;ಮೇ 31(ಗುರುವಾರ)

ನಾಮಪತ್ರ ಹಿಂಪಡೆಯಲು ಕೊನೆ ದಿನ;ಜೂನ್‌ 4(ಸೋಮವಾರ)

ಮತದಾನ;ಜೂನ್‌ 11(ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 4ವರೆಗೆ)

ಮತಗಳ ಎಣಿಕೆ;ಜೂನ್‌ 11(ಸೋಮವಾರ 5ಗಂಟೆ ಬಳಿಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.