ADVERTISEMENT

ಪರಿಸರ ಉಳಿವಿಗಾಗಿ ‘ಇಕೋ ಚೇತನ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ನಗರದಲ್ಲಿ ಭಾನುವಾರ 'ಅದಮ್ಯ ಚೇತನ' ಆಯೋಜಿಸಿದ್ದ "ಹಸಿರು ಜೀವನ ಶೈಲಿ ವಸ್ತುಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ" ಕಾರ್ಯಕ್ರಮದಲ್ಲಿ "Eco ಚೇತನ" ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವ ಯುವತಿಯರು. -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ 'ಅದಮ್ಯ ಚೇತನ' ಆಯೋಜಿಸಿದ್ದ "ಹಸಿರು ಜೀವನ ಶೈಲಿ ವಸ್ತುಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ" ಕಾರ್ಯಕ್ರಮದಲ್ಲಿ "Eco ಚೇತನ" ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವ ಯುವತಿಯರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ತಾರಸಿ ಕೈತೋಟ ನಿರ್ವಹಣೆ, ಮನೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ಸಾವಯವ ಗೊಬ್ಬರ, ಜೈವಿಕ ಅನಿಲ ತಯಾರಿ, ಸಿರಿಧಾನ್ಯಗಳ ಬಳಕೆ...   ಹೀಗೆ ಪರಿಸರ ಸ್ನೇಹಿ ಜೀವನ ರೂಪಿಸಿಕೊಳ್ಳುವ ಕುರಿತ ಹತ್ತು ಹಲವು ಸಂದೇಹಗಳನ್ನು ಜನ ಇಲ್ಲಿ ಪರಿಹರಿಸಿಕೊಂಡರು.

ಅದಮ್ಯ ಚೇತನ ಸಂಸ್ಥೆ ಯಡಿಯೂರು ಕೆರೆ ಬಳಿ ಭಾನುವಾರ ಹಮ್ಮಿಕೊಂಡಿದ್ದ ‘ಇಕೋ ಚೇತನ’ ಹಸಿರು ಜೀವನಶೈಲಿ ವಸ್ತು ಪ್ರದರ್ಶನ, ಮಾರಾಟ ಮತ್ತು ಕಾರ್ಯಾಗಾರ ಇದಕ್ಕೆ ವೇದಿಕೆ ಕಲ್ಪಿಸಿತು.

ಸಾವಯವ ಗೊಬ್ಬರ ತಯಾರಿಸಲು ಹಾಗೂ ತಾರಸಿ ತೋಟಕ್ಕೆ ಬೇಕಾದ ಪರಿಕರಗಳು, ಗಿಡಮೂಲಿಕೆಗಳಿಂದ ತಯಾರಿಸಿದ ಉತ್ಪನ್ನಗಳು, ಸಾವಯವ ಆಹಾರ ಉತ್ಪನ್ನಗಳು, ತಿಂಡಿ–ತಿನಿಸಿನ ಮಳಿಗೆಗಳು ಇಲ್ಲಿದ್ದವು. ಜನರು ಮಳಿಗೆಗಳಿಗೆ ತೆರಳಿ ಮಾಹಿತಿ ಪಡೆಯುವುದರ ಜೊತೆಗೆ ಅಗತ್ಯ ವಸ್ತುಗಳನ್ನು ಖರೀದಿಸಿದರು. ತ್ಯಾಜ್ಯರಹಿತ ಅಡುಗೆ ಮನೆಯ ಕುರಿತು ಅದಮ್ಯ ಚೇತನ ಸಂಸ್ಥೆಯ ಸದಸ್ಯರು ಪ್ರಾತ್ಯಕ್ಷಿಕೆ ನೀಡಿದರು.

ADVERTISEMENT

ಕಡಿಮೆ ಜಾಗದಲ್ಲಿ ಸಾವಯವ ಗೊಬ್ಬರ ತಯಾರಿಸುವ ಸರಳ ವಿಧಾನಗಳ ಪ್ರದರ್ಶನ ಗಮನ ಸೆಳೆಯಿತು. ಮೂರು ಮಡಿಕೆಗಳನ್ನು ಹೊಂದಿದ ಕಂಬ, ಪ್ಲಾಸ್ಟಿಕ್‌ ಡ್ರಮ್‌ಗಳಲ್ಲಿ ಗೊಬ್ಬರ ತಯಾರಿಸುವ ಬಗ್ಗೆ ಅನೇಕರು ಮಾಹಿತಿ ಪಡೆದರು.

ಬಯೋ ಗ್ಯಾಸ್, ಇಂಧನ ಉಳಿತಾಯಕ್ಕಾಗಿ ಬ್ರಿಕೆಟ್ಸ್ (ಶೇಂಗಾ ಸಿಪ್ಪೆ, ಕಬ್ಬಿನ ಜಲ್ಲೆ, ಮರದ ಹುಡಿ, ಒಣ ಹುಲ್ಲು, ಬಳಸಿದ ಕಾಗದ, ತೌಡುವಿನಂತಹ ವಸ್ತುಗಳಿಂದ ಇದನ್ನು ತಯಾರಿಸಬಹುದು), ಸೌರ ಶಕ್ತಿ ಬಳಕೆ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಯಿತು. 

ಸ್ವಾಸ್ಥ್ಯ ತಜ್ಞ ಡಾ.ಖಾದರ್, ‘ಪರಿಸರ ಮತ್ತು ಪ್ರಕೃತಿ ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ಸ್ವಾಸ್ಥ್ಯದಿಂದ ಇರಲು ಸಾಧ್ಯ. ಆಹಾರದಲ್ಲಿ ಆರೋಗ್ಯ ಹುಡುಕುವುದರಿಂದ ಪ್ರಯೋಜನವಿಲ್ಲ. ಹಿಂದೆ ನಿರ್ದಿಷ್ಟ ಜಾಗ, ಮಣ್ಣಿನ ಗುಣ, ನೀರಿನ ಲಭ್ಯತೆ ಮತ್ತು ಹವಾಗುಣಕ್ಕೆ ಅನುಗುಣವಾಗಿ ಬೆಳೆ ಬೆಳೆಯಲಾಗುತ್ತಿತ್ತು. ಆ ಪದ್ಧತಿ ಈಗ ನಿಂತಿದೆ. ಆಹಾರ ಬೆಳೆಯಲು ಪರಿಸರಸ್ನೇಹಿ ವಿಧಾನ ಬಳಸದ ಕಾರಣ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುತ್ತಿದೆ’ ಎಂದರು.

ಕಡಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆಗಳಿಗೆ ಡೀಸೆಲ್‌ ಬೆರೆಸಲಾಗುತ್ತಿದೆ. ಇದರಿಂದಾಗಿ ಅವುಗಳ ದರದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಡುಗೆ ಎಣ್ಣೆಯ ಪರಿಮಳ ಹೆಚ್ಚಿಸಲು ರಾಸಾಯನಿಕ ಬೆರೆಸುತ್ತಾರೆ. ತೆಂಗಿನ ಎಣ್ಣೆ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅದನ್ನು ಸೇವಿಸಿದರೆ ಬೊಜ್ಜು ಬರುತ್ತದೆ ಎಂದು ವೈದ್ಯರೇ ಹೆದರಿಸುತ್ತಿದ್ದಾರೆ
ಎಂದು ಟೀಕಿಸಿದರು.

ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ ಕುಮಾರ್, ‘2-3 ತಿಂಗಳಿಗೊಮ್ಮೆ ಇಕೋ ಚೇತನ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು. ಕೇಂದ್ರ ಸಚಿವ ಅನಂತ ಕುಮಾರ್‌, ‘ತ್ರೇತಾಯುಗ ಹಾಗೂ ದ್ವಾಪರಾ ಯುಗದಲ್ಲಿ ಅಕ್ಕಿ ಮತ್ತು ಗೋಧಿ ಬಳಕೆಯೇ ಇರಲಿಲ್ಲ. ಬದಲಿಗೆ ಸಾಮೆ, ನವಣೆಗಳನ್ನು ಬಳಸುತ್ತಿದ್ದರು. ರಾಮನೂ ಸಿರಿ
ಧಾನ್ಯಗಳ ಆಹಾರ ಸೇವಿಸುತ್ತಿದ್ದ ಎಂಬುದನ್ನು ಓದಿದ್ದೇನೆ. ಸಿರಿಧಾನ್ಯ, ಸಾವಯವ ಕೃಷಿ, ಪ್ರಕೃತಿ ಪರಿಸರ ಉಳಿವು ರಾಮನವಮಿಯ ಧ್ಯೇಯವಾಗಬೇಕು’ ಎಂದು ಅವರು
ತಿಳಿಸಿದರು.

‘ಪ್ಲೇಟ್ ಬ್ಯಾಂಕ್’

ಬಳಸಿ ಎಸೆಯುವ ತಟ್ಟೆ, ಲೋಟಗಳಿಂದ ವಾತಾವರಣದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯಲು ಅದಮ್ಯ ಚೇತನ ‘ಪ್ಲೇಟ್ ಬ್ಯಾಂಕ್’ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ.

‘ಸಂಸ್ಥೆಯಲ್ಲಿ ಸದ್ಯ 10 ಸಾವಿರಕ್ಕೂ ಹೆಚ್ಚು ಸ್ಟೀಲ್ ತಟ್ಟೆ, ಲೋಟ, ಚಮಚಗಳ ಸಂಗ್ರಹವಿದೆ. ಮದುವೆ ಮತ್ತಿತರ ಸಾರ್ವಜನಿಕ ಸಮಾರಂಭಗಳಲ್ಲಿ
ಬಳಸಲು ಅವುಗಳನ್ನು ನೀಡಲು ನಿರ್ಧರಿಸಿದ್ದೇವೆ. ಇದಕ್ಕೆ ಯಾವುದೇ ರೀತಿಯ ದರ ವಿಧಿಸುವುದಿಲ್ಲ. ಆದರೆ, ಅವು ಕಳೆದು ಹೋದರೆ, ಸಂಘಟಕರೇ ಅವುಗಳ ವೆಚ್ಚವನ್ನು ಭರಿಸಬೇಕಾಗುತ್ತದೆ’ ಎಂದು ಸಂಸ್ಥೆಯ ಮುರಳೀಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.