ಬೆಂಗಳೂರು: `ಯೋಚಿಸಿ, ಸೇವಿಸಿ, ಉಳಿಸಿ' ಘೋಷಣೆಯೊಂದಿಗೆ ಪರಿಸರ ಜಾಗೃತಿ ಮೂಡಿಸುವ ಜಾಥಾ ಹಾಗೂ ಗಿಡಗಳನ್ನು ನೆಡುವ ಮೂಲಕ ನಗರದಲ್ಲಿ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ವಿವಿಧ ಸಂಘಟನೆಗಳು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, `ದೇಶದ ಆರ್ಥಿಕ ಬೆಳವಣಿಗೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗಿದೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವುದು ಮತ್ತು ಸಾರ್ವಜನಿಕರು ಮಾಲಿನ್ಯ ತಡೆಗಟ್ಟುವಿಕೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಹೇಳಿದರು.
ಜಯ ಕರ್ನಾಟಕ ಸಂಘಟನೆಯು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬನಪ್ಪ ಉದ್ಯಾನ ದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪರಿಸರ ಜಾಗೃತಿ ಜಾಥಾ ಏರ್ಪಡಿಸಿತ್ತು.
ಬಸ್, ಆಟೊ ಚಾಲಕರಿಗೆ, ಪ್ರಯಾಣಿಕರಿಗೆ, ವಾಹನ ಸವಾರರಿಗೆ ಉಚಿತವಾಗಿ 500 ಕ್ಕೂ ಹೆಚ್ಚು ಸಸಿಗಳನ್ನು ನೀಡಲಾಯಿತು. ಜಾಥಾದ ಕೊನೆಯಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸಸಿಗಳನ್ನು ನೆಡಲಾಯಿತು. ಮೈತುಂಬ ಹಸಿರು ಎಲೆಗಳು ಹಾಗೂ ಬಳ್ಳಿಗಳ ಹೊದಿಕೆಯನ್ನು ಹೊದ್ದು ಮರದಂತೆ ಕಾಣುವ ಕಾರ್ಯಕರ್ತರು ಪರಿಸರ ಸಂರಕ್ಷಣೆ ಸಂದೇಶ ಸಾರುವುದು ವಿಶೇಷವಾಗಿತ್ತು.
ಸೌಂದರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ಸೌಂದರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸೌಂದರ್ಯ ಪಿ. ಮಂಜಪ್ಪ ಅವರು ಉದ್ಘಾಟಿಸಿದರು. ಕಾಲೇಜಿನ ಸುಮಾರು 500 ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾಲ್ನಡಿಗೆಯ ಜಾಥಾ ನಡೆಸಿದರು.
ಯಶವಂತಪುರದ ಬಾಪು ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ಪರಿಸರ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿತ್ತು. ಸಾರ್ವಜನಿಕರಲ್ಲಿ ಪರಿಸರದ ಕುರಿತು ಅರಿವು ಮೂಡಿಸಲಾಯಿತು. ದಿ ಲಲಿತ್ ಅಶೋಕ್ ಅಂಡ್ ಬೆಂಗಳೂರು ಸೇವಾ ಕೂಟವು ಬುಧವಾರ ಪರಿಸರ ದಿನಾಚರಣೆಯ ಅಂಗವಾಗಿ ದಿ ಲಲಿತ್ ಅಶೋಕ್ ಅಂಡ್ ಬೆಂಗಳೂರು ಸೇವಾ ಕೂಟವು ಕೆಂಪೇಗೌಡ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಆಚರಿಸಿತು. ಹಿಂದೂಸ್ತಾನ್ ಕೋಕಾ ಕೋಲಾ ಸಂಸ್ಥೆಯು ನೆಲ್ಲಿಗುಡ್ಡ ಕೆರೆಯ ಸುತ್ತಲೂ ಗಿಡಗಳನ್ನು ನೆಡುವ ಕಾರ್ಯಕ್ರಮ ಏರ್ಪಡಿಸಿತ್ತು.
ವಿಶ್ವ ಸಂಸ್ಥೆಯು ನೀಡಿರುವ ಘೋಷ ವಾಕ್ಯ `ಯೋಚಿಸಿ, ಸೇವಿಸಿ, ಉಳಿಸಿ' ಕುರಿತು ಅರಿವು ಮೂಡಿಸಿದರು. ಆಹಾರದ ಬಳಕೆ ಮತ್ತು ಆಹಾರ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್ ಹಲಸೂರು ಕೆರೆಯ ಸುತ್ತಲೂ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿತು.
ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್‌ನ ಕಮಾಂಡೆಂಟ್ ಬ್ರಿಗೇಡಿಯರ್ ಎಂ.ಎನ್.ದೇವಯ್ಯ ಮಾತನಾಡಿ, `ಹಸಿರೇ ಉಸಿರು, ಹಸಿರಿದ್ದರೆ ಮಾತ್ರ ನಾವು ನಿರ್ಮಲ ಗಾಳಿ ಉಸಿರಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಪ್ರಗತಿಯ ದೃಷ್ಟಿಯಿಂದ ಮರ ಕಡಿಯುತ್ತ ಹೋಗುವುದು ಸರಿಯಲ್ಲ. ಮರ ಕಡಿದಷ್ಟು ಮರಗಳನ್ನು ನೆಟ್ಟು, ಪೋಷಣೆ ಮಾಡಬೇಕಾದದ್ದು ಅಗತ್ಯವಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.