ADVERTISEMENT

‘ಪರಿಸರ ಸಂರಕ್ಷಣೆ ಜೀವನದ ಧ್ಯೇಯವಾಗಲಿ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:55 IST
Last Updated 5 ಜೂನ್ 2017, 19:55 IST
ಕೌಸ್ತುಭ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಹಸಿರು ಜಾಗೃತಿ ಜಾಥಾ’ದಲ್ಲಿ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು.
ಕೌಸ್ತುಭ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಹಸಿರು ಜಾಗೃತಿ ಜಾಥಾ’ದಲ್ಲಿ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು.   

ಬೆಂಗಳೂರು: ನಗರದಾದ್ಯಂತ ವಿವಿಧ ಸಂಸ್ಥೆಗಳ ವತಿಯಿಂದ ವಿಶ್ವ ಪರಿಸರ ದಿನವನ್ನು ಸೋಮವಾರ ಆಚರಿಸಲಾಯಿತು. ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ 4ನೇ ಘಟಕದಲ್ಲಿ ಪರಿಸರ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನೀರಿನ ಮರುಬಳಕೆ ಸ್ಥಾವರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ಮಾಡಿದರು.

ಇದನ್ನು ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ 28 ಘಟಕಗಳಲ್ಲಿ ನೀರಿನ ಮರುಬಳಕೆಯ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 58 ಘಟಕಗಳಲ್ಲಿ ಸ್ಥಾವರಗಳನ್ನು ₹ 23 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಈ ಯೋಜನೆಯ ಮೂಲಕ 41 ಕೋಟಿ ಲೀಟರ್‌ ನೀರನ್ನು ಸಂರಕ್ಷಿಸಿ ಮರುಬಳಕೆ ಮಾಡಬಹುದು.

ನಿಗಮದಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಉಪಕ್ರಮಗಳು ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ‘ಕೈಪಿಡಿ’ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ಸಾರಿಗೆ ಬಳಸಿ– ಪರಿಸರ ಸಂರಕ್ಷಿಸಿ ಸಂದೇಶಗಳ ಭಿತ್ತಿಪತ್ರಗಳನ್ನು ನಿಗಮದ ಬಸ್‌ಗಳಲ್ಲಿ ಅಂಟಿಸುವ ಮೂಲಕ ಪ್ರಚಾರ ಮಾಡಲಾಯಿತು.

ADVERTISEMENT

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌, ಉಪಾಧ್ಯಕ್ಷ ಬಸವರಾಜ ಬುಳ್ಳಾ, ಆಡಳಿತ ಮಂಡಳಿಯ ನಿರ್ದೇಶಕ ಟಿ.ಕೆ.ಸುಧೀರ್‌ ಉಪಸ್ಥಿತರಿದ್ದರು.

ಬಾಂಧವ ಸಂಸ್ಥೆ: ಜಯನಗರದ ಬೈರಸಂದ್ರ ವಾರ್ಡ್‌ನ ಸದಸ್ಯ ಎನ್‌.ನಾಗರಾಜು ನೇತೃತ್ವದ ಬಾಂಧವ ಸಂಸ್ಥೆಯು ಹಮ್ಮಿಕೊಂಡಿದ್ದ ‘ಮನೆಗೊಂದು ಮಗು, ಮಗುವಿಗೊಂದು ಮರ’ ಯೋಜನೆಗೆ ಚಾಲನೆ ನೀಡಲಾಯಿತು.

ಮೂರು ತಿಂಗಳಲ್ಲಿ ಬಡಾವಣೆಯ ನಿವಾಸಿಗಳಿಗೆ ಸಸಿಗಳನ್ನು ವಿತರಿಸಲಾಗುತ್ತದೆ. ಶಾಲಾ ಮಕ್ಕಳು ಬೈರಸಂದ್ರ ವಾರ್ಡ್‌ನಲ್ಲಿ ‘ಹಸಿರೇ ಉಸಿರು’ ಎಂಬ ಜಾಥಾವನ್ನು ಹಮ್ಮಿಕೊಂಡಿದ್ದರು. ಪರಿಸರದ ಬಗ್ಗೆ ಅರಿವು ಮೂಡಿಸಿದರು. ಹವ್ಯಾಸಿ ಕಲಾ ತಂಡದ ಸದಸ್ಯರು ಹಾಗೂ ಶಾಲಾ ಮಕ್ಕಳು ಪರಿಸರ ಕಾಳಜಿ ಕುರಿತು ಬೀದಿ ನಾಟಕ ಪ್ರಸ್ತುತಪಡಿಸಿದರು.

ಹಸಿರು ರಥ ವಾಹನ ಬಿಡುಗಡೆ: ಯಡಿಯೂರು ಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ  ‘ಹಸಿರು ರಥ ವಾಹನ ಬಿಡುಗಡೆ ಮತ್ತು 2,000 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಔಷಧೀಯ ಸಸ್ಯ ವಿತರಣೆ: ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು.

ಒಂದು ಕೋಟಿ ಸಸಿ ನೆಡುವ ಕಾರ್ಯಕ್ರಮ: ಸಮರ್ಥ ಭಾರತ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ 1 ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.