ADVERTISEMENT

ಪುಸ್ತಕ ಖರೀದಿಗೆ ಹೋದವನು ಮರಳಿ ಬರಲಿಲ್ಲ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:15 IST
Last Updated 6 ಮಾರ್ಚ್ 2012, 19:15 IST

ಬೆಂಗಳೂರು: `ಪುಸ್ತಕ ಖರೀದಿ ಮಾಡಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು ಜೀವಂತ ಬರಲಿಲ್ಲ~
ಇದು ಸೋಮವಾರ ರಾತ್ರಿ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಚಲಿಸುತ್ತಿದ್ದ ಮೆಟ್ರೊ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ವಿಷ್ಣು ಶರಣ್‌ನ ಸಂಬಂಧಿಕರ ಅಳಲು.

 `ವಿಷ್ಣು ಶರಣ್ (17) ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಮಾ.13ರಿಂದ ಮೊದಲ ಪಿಯುಸಿ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ಪುಸ್ತಕ ಖರೀದಿ ಮಾಡುವುದಾಗಿ ಹೇಳಿ ಸಂಜೆ ಏಳು ಗಂಟೆಗೆ ಮನೆಯಿಂದ ಹೋದ. ರಾತ್ರಿ ಎಂಟು ಗಂಟೆಗೆ ಫೋನ್ ಮಾಡಿದಾಗ ಮನೆಗೆ ಬರುತ್ತಿದ್ದೇನೆ ಎಂದು ಹೇಳಿದವನು ಬರಲೇ ಇಲ್ಲ~ ಎಂದು ವಿಷ್ಣುವಿನ ಸಂಬಂಧಿಕರಾದ ರವಿ ತಿಳಿಸಿದರು.

`9.15ಕ್ಕೆ ಫೋನ್ ಮಾಡಿದರೆ ವಿಷ್ಣು ರಿಸೀವ್ ಮಾಡಲಿಲ್ಲ.ಇದರಿಂದ ಆತಂಕಗೊಂಡು ಪೊಲೀಸ್ ಠಾಣೆಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ ಪೊಲೀಸರೇ ಫೋನ್ ಮಾಡಿ ನಮ್ಮನ್ನು ಬರಲು ಹೇಳಿದರು. ಯಾವುದಾದರೂ ಕಾರಣಕ್ಕೆ ವಿಷ್ಣುವನ್ನು ಬಂಧಿಸಿರಬಹುದೆಂದುಕೊಂಡು ಸ್ಥಳಕ್ಕೆ ಹೋದರೆ ವಿಷ್ಣು ಪ್ರಾಣ ಬಿಟ್ಟಿದ್ದ~ ಎಂದು ಅವರು ಅಳಲು ತೋಡಿಕೊಂಡರು.

`ಮೊದಲಿನಿಂದಲೂ ಶೇ 95ರಷ್ಟು ಅಂಕ ಗಳಿಸುತ್ತಾ,ಶಾಲೆಯಲ್ಲಿ ಪ್ರಥಮ ರ‌್ಯಾಂಕ್ ಪಡೆಯುತ್ತಿದ್ದ ವಿಷ್ಣುವನ್ನು ಎಲ್ಲರೂ ಇಷ್ಟಪಡುತ್ತಿದ್ದರು. ವಿಷ್ಣುವನ್ನು ನೋಡಿ ಕಲಿಯಿರಿ ಎಂದು ಟೀಚರ್ ನಮಗೆ ಹೇಳುತ್ತಿದ್ದರು. ಆದರೆ, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ~ ಎಂದು ವಿಷ್ಣುವಿನ ಸಹಪಾಠಿಗಳು ಹೇಳಿದರು.

  ಸತ್ಯನಾರಾಯಣ್ ಮತ್ತು ನಿರ್ಮಲಾ ಅವರ  ಮಗ ವಿಷ್ಣು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ವಿಷ್ಣು ತನ್ನ ಅಕ್ಕ ಅನ್ವಿತಾಳನ್ನು ತುಂಬಾ ಹಚ್ಚಿಕೊಂಡಿದ್ದ. ಅಕ್ಕನಿಗೆ ಎರಡು ವರ್ಷದ ಹಿಂದೆ ಮದುವೆಯಾಗಿತ್ತು.

 ವಿಷ್ಣು ಶಾಂತ ಸ್ವಭಾವದವನು. ಬೆಳಿಗ್ಗೆ ಆಟೊದಲ್ಲಿ ಕಾಲೇಜಿಗೆ ಹೋಗುವಾಗ ಹಾಗೂ ಸಂಜೆ ಕಾಲೇಜಿನಿಂದ ಮನೆಗೆ ಬರುವಾಗ ಮಾತ್ರ ಕಾಣಿಸಿಕೊಳ್ಳುತ್ತಿದ್ದ. ನೆರೆಮನೆಯ ಮಕ್ಕಳೊಂದಿಗೆ ವಿಷ್ಣು ಆಟವಾಡುತ್ತಿರಲಿಲ್ಲ.

`ವಿಷ್ಣು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ `ಸರಿ ನಾನು ಸಾಯುತ್ತಿದ್ದೇನೆ~ ಎಂದು ತನ್ನ ಸಹಪಾಠಿ ಒಬ್ಬಳಿಗೆ ಸಂದೇಶ ಕಳುಹಿಸಿದ್ದಾನೆ. ಅವನು ಮಾಡಿದ ಕೊನೆಯ ಸಂದೇಶವನ್ನು ಪೊಲೀಸರು ನಮಗೆ ತೋರಿಸಿದರು.

ಸಂದೇಶ ಕಳುಹಿಸಿದ ಆ ಹುಡುಗಿ ತನ್ನನ್ನು ಚುಡಾಯಿಸುತ್ತಿದ್ದಾಳೆ ಎಂದು ಮೂರು ತಿಂಗಳ ಹಿಂದೆಯೇ ಮನೆಯಲ್ಲಿ ಹೇಳಿದ್ದ. ಬೇರೆ ಕಾಲೇಜಿಗೆ ಸೇರಿಸುವುದಾಗಿ ಪೋಷಕರು ಹೇಳಿದಾಗ ಅದನ್ನು ತಿರಸ್ಕರಿಸಿದ್ದ~ ಎಂದು ವಿಷ್ಣು ಸಂಬಂಧಿಕರು ತಿಳಿಸಿದರು.

ಮರಣೋತ್ತರ ಪರೀಕ್ಷೆ ನಂತರ ಬೌರಿಂಗ್ ಆಸ್ಪತ್ರೆಯಿಂದ ಮಂಗಳವಾರ ಬೆಳಿಗ್ಗೆ 11.45ರ ಸುಮಾರಿಗೆ ಮೃತದೇಹವನ್ನು ಮನೆಗೆ ತರಲಾಯಿತು. ಸಂಜೆ 4 ಗಂಟೆಗೆ ಚಾಮರಾಜಪೇಟೆ  ಸಮೀಪದ ಟಿ.ಆರ್.ಮಿಲ್ ಬಳಿ ವಿಷ್ಣುವಿನ ಅಂತ್ಯಕ್ರಿಯೆ ನಡೆಯಿತು ಎಂದು ಸಂಬಂಧಿಕರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.