ಬೆಂಗಳೂರು: ‘ಕೆಳಜಾತಿ ಮತ್ತು ಶೋಷಣೆಗೆ ಒಳಗಾದ ಸಮುದಾಯಗಳ ಪ್ರಸಿದ್ಧ ವ್ಯಕ್ತಿಗಳನ್ನು ಮೇಲ್ಜಾತಿಗೆ ಸೇರಿದವರು ಎಂದು ಬಿಂಬಿಸುವ ಕೆಲಸವಾಗುತ್ತಿದೆ’ ಎಂದು ಭಾರತೀಯ ವಾಲ್ಮೀಕಿ ಧರ್ಮ ಸಮಾಜದ ರಾಜ್ಯಾಧ್ಯಕ್ಷ ಸಂದೇಶ್ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಳಜಾತಿಗಳಲ್ಲಿ, ಬೇಡ ಸಮುದಾಯದಲ್ಲಿ ಮಹನೀಯರು ಜನಿಸಬಾರದೆ? ವಾಲ್ಮೀಕಿ ಬ್ರಾಹ್ಮಣ ಎನ್ನುವುದಕ್ಕೆ ಆಧಾರವೇನು?
ಇದು ಶೋಷಿತರಿಗೆ ಜ್ಞಾನವನ್ನು ನಿರಾಕರಿಸುತ್ತಿರುವ ಮತ್ತೊಂದು ವಿಧಾನ’ ಎಂದರು.
‘ಅಂಕಣಕಾರ ಡಾ.ಕೆ.ಎಸ್. ನಾರಾಯಣಚಾರ್ಯ ಅವರು ಬರೆದಿರುವ ‘ವಾಲ್ಮೀಕಿ ಯಾರು?’ ಪುಸ್ತಕದಲ್ಲಿ ವಾಲ್ಮೀಕಿಯನ್ನು ಬ್ರಾಹ್ಮಣ ಜಾತಿಯ ಮಗು, ನದಿಯ ಬಳಿಯಿಂದ ಮಗುವನ್ನು ಹದ್ದು ಹೊತ್ತುಕೊಂಡು ಹೋಗಿ ಬೇಡರ ಬಳಿ ಬಿಟ್ಟಿತು ಎಂದು ಬರೆದಿದ್ದಾರೆ. ಇದನ್ನು ನಂಬಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಸಂಘಟನೆಯ ಸದಸ್ಯ ದೇವರಾಜ್ ಮಾತನಾಡಿ ‘ಸಮರ್ಥ ಆಧಾರಗಳೊಂದಿಗೆ ಚರ್ಚೆಗೆ ಬರುವುದಾದರೆ ನಾವು ಚರ್ಚೆಗೆ ಸಿದ್ಧರಿದ್ದೇವೆ.
ಅದರ ಹೊರತಾಗಿ ಪುರಾಣಗಳನ್ನು ತಿರುಚುವ ಕೆಲಸ ಮಾಡಬಾರದು. ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ದೇವರಾಜ್ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.