ADVERTISEMENT

ಪೆಟ್ರೋಲ್ ಬಂಕ್ ಮಾಲೀಕರ ನಿರ್ಧಾರ: 15ರಿಂದ ಒಂದು ಪಾಳಿ ಕೆಲಸ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 20:00 IST
Last Updated 12 ಅಕ್ಟೋಬರ್ 2012, 20:00 IST

ಬೆಂಗಳೂರು: ಅಪೂರ್ವ ಚಂದ್ರ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪೆಟ್ರೋಲ್ ಬಂಕ್ ಮಾಲೀಕರು ಅಕ್ಟೋಬರ್ 15ರಿಂದ ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

`ಪೆಟ್ರೋಲ್ ಬಂಕ್ ವಿತರಕರ ಕಮಿಷನ್ ಹೆಚ್ಚಿಸಬೇಕೆಂದು ಆಗ್ರಹಿಸಿ ಇತ್ತೀಚೆಗೆ ಭಾರತ ಪೆಟ್ರೋಲ್ ವಿತರಕರ ಒಕ್ಕೂಟವು ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಅ.1 ಮತ್ತು ಅ.2ರಂದು ತೈಲ ಕಂಪೆನಿಗಳಿಂದ ಪೆಟ್ರೋಲ್ ಖರೀದಿ ಮಾಡದೇ ಶಾಂತಿಯುತ ಪ್ರತಿಭಟನೆ ನಡೆಸಿದ್ದೆವು.

ಅ.15ರೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಬಂಕ್ ನೌಕರರು ಕೇವಲ ಒಂದು ಪಾಳಿಯಲ್ಲಿ ಮಾತ್ರ ಕೆಲಸ ಮಾಡುತ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದೆವು. ನಿಗದಿತ ವೇಳೆಗೆ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ದೇಶವ್ಯಾಪಿ ಬಂಕ್‌ಗಳಲ್ಲಿ ನೌಕರರು ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ~ ಎಂದು ಪೆಟ್ರೋಲ್ ವಿತರಕರ ಸಂಘದ ನಗರ ಘಟಕದ ಕಾರ್ಯದರ್ಶಿ ಪೃಥ್ವಿ `ಪ್ರಜಾವಾಣಿ~ಗೆ ತಿಳಿಸಿದರು.

`ನಗರಗಳಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಮಾತ್ರ ಬಂಕ್‌ಗಳು ಚಾಲ್ತಿಯಲ್ಲಿರುತ್ತವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ಮಾತ್ರ ಬಂಕ್‌ಗಳು ತೆರೆದಿರುತ್ತವೆ. ಈ ಅವಧಿ ನಂತರ ಇಂಧನವಿದ್ದರೂ ಸೇವೆ ನೀಡುವುದಿಲ್ಲ~ ಎಂದು ಅವರು ಹೇಳಿದ್ದಾರೆ.

ಬಂಕ್ ನೌಕರರಿಗೆ ಬಿಸಿ: `ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಲು ನಿರ್ಧರಿಸಿರುವುದರಿಂದ ಬಂಕ್ ನೌಕರರ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು. ಅ.15ರಿಂದ ಸುಮಾರು 10ರಿಂದ 15 ನೌಕರರು ಮಾತ್ರ ಬಂಕ್‌ಗಳಲ್ಲಿರುತ್ತಾರೆ~ ಎಂದು ಪೆಟ್ರೋಲ್ ವಿತರಕರ ಸಂಘದ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್ ತಿಳಿಸಿದ್ದಾರೆ.

`ನೌಕರರ ಸಂಖ್ಯೆಯನ್ನು ಕಡಿತಗೊಳಿಸುವಂತೆ ಬಂಕ್ ವ್ಯವಸ್ಥಾಪಕರಿಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿರುವುದರಿಂದ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮಾಸಿಕ ಮೂರು ಸಾವಿರ ರೂಪಾಯಿ ವೇತನ ಪಡೆದು ಜೀವನ ನಡೆಸುತ್ತಿದ್ದೇನೆ. ಕೇಂದ್ರ ಸರ್ಕಾರ ವಿತರಕರ ಬೇಡಿಕೆಗಳನ್ನು ಈಡೇರಿಸಿ ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರುತ್ತದೆ~ ಎಂದು ಇಂದಿರಾನಗರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನೌಕರ ಆರ್. ಸುಂದರ್‌ರಾಜ್ ವಿಶ್ವಾಸ ವ್ಯಕ್ತಪಡಿಸಿದರು.

`ಬಹುತೇಕ ಸಂದರ್ಭದಲ್ಲಿ ಕಡಿಮೆ ವೇತನಕ್ಕೆ ಎರಡು ಪಾಳಿಯಲ್ಲಿ ಕೆಲಸ ಮಾಡಿದ್ದೇವೆ. ಈಗ ನೌಕರರ ಸಂಖ್ಯೆ ಕಡಿಮೆಯಾಗುವುದರಿಂದ ಕೆಲಸದ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ~ ಎಂಬುದು ವಿಜಯನಗರದಲ್ಲಿರುವ ಪೆಟ್ರೋಲ್ ಬಂಕ್ ನೌಕರ ಸೆಲ್ವಕುಮಾರ್ ಅವರ ಅಭಿಪ್ರಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.