ADVERTISEMENT

ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಬೆಂಗಳೂರು: ಪೊಲೀಸರ ಸೋಗಿನಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರನ್ನು ಅಡ್ಡಗಟ್ಟಿ ಹಣ ಮತ್ತು ಮೊಬೈಲ್ ಸುಲಿಗೆ ಮಾಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಎಎಸ್‌ಐ ಒಬ್ಬರ ಪುತ್ರ ಮಂಜುನಾಥ್(27) ಬಂಧಿತ ಆರೋಪಿ.
 
ಆತ ಕುಟುಂಬ ಸದಸ್ಯರೊಂದಿಗೆ ಆಡುಗೋಡಿಯ ಸಿಎಆರ್ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ. ಬಿ.ಎ 2ನೇ ವರ್ಷದಲ್ಲಿ ಅನುತ್ತೀರ್ಣನಾಗಿದ್ದ ಆತ ವಿದ್ಯಾಭ್ಯಾಸವನ್ನು ಮುಂದುವರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಕೋರಮಂಗಲದ ಲಕ್ಷ್ಮಿ ಉದ್ಯಾನದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸುರೇಶ್ ಎಂಬುವರನ್ನು ಮಂಜುನಾಥ್ ಅಡ್ಡಗಟ್ಟಿದ್ದ. ತಾನು ಕೋರಮಂಗಲ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಎಂದು ಅವರಿಗೆ ಪರಿಚಯಿಸಿಕೊಂಡ ಆರೋಪಿ, ಏಕೆ ಹೆಲ್ಮೆಟ್ ಧರಿಸಿಲ್ಲ ಎಂದು ಪ್ರಶ್ನಿಸಿದ. ಅಲ್ಲದೇ ಚಾಲನಾ ಪರವಾನಗಿ ಮತ್ತು ವಾಹನದ ದಾಖಲೆಪತ್ರಗಳನ್ನು ತೋರಿ ಸುವಂತೆ ಹೇಳಿದ. ಆದರೆ, ಅವರ ಬಳಿ ಚಾಲನಾ ಪರವಾನಗಿ ಇರಲ್ಲಿಲ್ಲ.

ಇದನ್ನೇ ನೆಪ ಮಾಡಿಕೊಂಡ ಆತ, ಸುರೇಶ್ ಬಳಿ ಇದ್ದ 500 ರೂಪಾಯಿ ಹಣ ಮತ್ತು ಮೊಬೈಲ್‌ಫೋನ್ ಕಸಿದುಕೊಂಡಿದ್ದ. ಜತೆಗೆ ವಾಹನವನ್ನು ಕಿತ್ತುಕೊಂಡು, ಬುಧವಾರ ಬೆಳಿಗ್ಗೆ ಠಾಣೆಯ ಬಳಿ ಬಂದು ವಾಪಸ್ ಪಡೆದುಕೊಳ್ಳುವಂತೆ ಹೇಳಿ ಕಳುಹಿಸಿದ್ದ. ಆತನ ಬಗ್ಗೆ ಅನುಮಾನಗೊಂಡ ಸುರೇಶ್ ಅವರು ಠಾಣೆಗೆ ರಾತ್ರಿಯೇ ದೂರು ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

`ಈ ದೂರಿನ ಹಿನ್ನೆಲೆಯಲ್ಲಿ ಠಾಣೆಯ ಸಿಬ್ಬಂದಿಯನ್ನು ಮಫ್ತಿಯಲ್ಲಿ ಲಕ್ಷ್ಮಿ ಉದ್ಯಾನದ ಬಳಿಗೆ ಕಳುಹಿಸಲಾಯಿತು. ಉದ್ಯಾನದ ಸಮೀಪವೇ ನಿಂತಿದ್ದ ಆರೋಪಿ ಮಂಜುನಾಥ್, ಸಿಬ್ಬಂದಿಗೂ ತಾನು ಪೊಲೀಸ್ ಎಂದು ಪರಿಚಯಿಸಿಕೊಂಡು ವಿಚಾರಣೆ ನಡೆಸುವ ನಾಟಕವಾಡಿದ. ಸಿಬ್ಬಂದಿ ಆತನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದರು~ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಯು ಇದೇ ರೀತಿ ಎಚ್‌ಎಸ್‌ಆರ್ ಲೇಔಟ್ ಸಮೀಪದ ಜಕ್ಕಸಂದ್ರದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ 384ರ ಅಡಿ ಸುಲಿಗೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

`ಪೊಲೀಸರ ಸೋಗಿನಲ್ಲಿ ವಂಚಿಸುವ ಕಿಡಿಗೇಡಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಪೊಲೀಸ್ ಸಮವಸ್ತ್ರ ಧರಿಸದೆ ವಿಚಾರಣೆ ನೆಪದಲ್ಲಿ ವಂಚಿಸಲು ಯತ್ನಿಸುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಬಂದರೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು~ ಎಂದು ಕೋರಮಂಗಲ ಇನ್‌ಸ್ಪೆಕ್ಟರ್ ಎಸ್.ಸುಧೀರ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.