ADVERTISEMENT

ಪೌಷ್ಟಿಕ ಆಹಾರ: ವಿಶೇಷ ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಬೆಂಗಳೂರು: ನೂತನ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲು ವಿಶೇಷ ಅನುದಾನ ಮೀಸಲಿಡಬೇಕು ಹಾಗೂ 18 ವರ್ಷದೊಳಗಿನ ಮಕ್ಕಳ ಬೇಡಿಕೆಗಳಿಗೆ  ಆದ್ಯತೆ ನೀಡಬೇಕು ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಎಂ.ನಾರಾಯಣಸ್ವಾಮಿ, ಅಪೌಷ್ಟಿಕತೆಯಿಂದ ಬಳಲುವ ಮ್ಕಕಳ ಸಂಖ್ಯೆಯನ್ನು ಕಡಿಮೆ ಮಾಡಲು ಅಂಗನವಾಡಿ ಮಕ್ಕಳಿಗೆ ಈಗಾಗಲೇ ಹಾಲು, ಮೊಟ್ಟೆ ಹಾಗೂ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ. ಆದರೆ ಈ ಯೋಜನೆ  ರಾಜ್ಯದ ಎಲ್ಲಾ ಕಡೆಗಳಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸುವ ವ್ಯವಸ್ಥೆಯನ್ನು ಪುನಃ ಪ್ರಾರಂಭಿಸಬೇಕು. ಮಕ್ಕಳ ಅಪೌಷ್ಟಿಕತೆ ಹಾಗೂ ಅಂಗನವಾಡಿಗಳ ಸಬಲೀಕರಣಕ್ಕಾಗಿ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅಧ್ಯಕ್ಷತೆಯ ಸಮಿತಿ ನೀಡಿರುವ ವರದಿಯನ್ನು ಸಮರ್ಥವಾಗಿ ಜಾರಿಗೊಳಿಸಬೇಕು  ಎಂದು ಒತ್ತಾಯಿಸಿದರು.

ಶಾಲಾ ಶಿಕ್ಷಣದ ಉನ್ನತೀಕರಣ ಹಾಗೂ ಪುನರ್ ಸಂಘಟನೆಯ ಹೆಸರಿನಲ್ಲಿ ದೆಹಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಗೋವಿಂದ್ ಅವರು ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಬಹುದು ಎಂದು ವರದಿ ನೀಡಿದ್ದಾರೆ. ಇದರಿಂದ ಹಲವಾರು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಹೀಗಾಗಿ ಈ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಜೊತೆಗೆ ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಿಗೆ, ಮೂಲಸೌಲಭ್ಯಗಳನ್ನು ಒದಗಿಸಿ, ಶಿಕ್ಷರನ್ನು ನೇಮಕಮಾಡುವ ಮೂಲಕ ಕೇಂದ್ರೀಯ ಶಾಲೆಗಳ ಮಟ್ಟಕ್ಕೆ ಉನ್ನತೀಕರಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.