ADVERTISEMENT

ಪ್ರಕರಣ ಭೇದಿಸಿದ ಪೊಲೀಸರಿಗೆ ಪೌರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:34 IST
Last Updated 5 ಮಾರ್ಚ್ 2014, 19:34 IST
ಪ್ರಕರಣ ಭೇದಿಸಿದ ಪೊಲೀಸರಿಗೆ ಪೌರ ಸನ್ಮಾನ
ಪ್ರಕರಣ ಭೇದಿಸಿದ ಪೊಲೀಸರಿಗೆ ಪೌರ ಸನ್ಮಾನ   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ‘ಸೈಕೊ’ ಶಂಕರ್‌ ಬಂಧನ ಸೇರಿದಂತೆ ವಿವಿಧ  ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 21 ಪೊಲೀಸರನ್ನು ಸನ್ಮಾನಿಸಲಾಯಿತು.

ರೌಂಡ್ ಟೇಬಲ್ ಇಂಡಿಯಾ ಹಾಗೂ ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಗಳು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಖಾಕಿ ತೊಟ್ಟ ಯೋಧ’ ಕಾರ್ಯಕ್ರಮದಲ್ಲಿ ಎಸ್‌ಐ, ಎಎಸ್‌ಐ,  ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳನ್ನು ಗೌರವಿಸಲಾಯಿತು.

ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರಾದಕರ್‌, ‘ನಮ್ಮ ಸಿಬ್ಬಂದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳು­ವುದು ವಿರಳ. ಅವರು ಸಭಾಂಗಣದ ಆಚೆ ನಿಂತು ಬಂದೋ­ಬಸ್ತ್, ಸಂಚಾರ ನಿರ್ವಹಣೆ­ಯಂತಹ ಕರ್ತವ್ಯದಲ್ಲಿ ತೊಡಗಿರುತ್ತಾರೆ. ಆದರೆ, ಈ ಕಾರ್ಯ­ಕ್ರಮದ ಮೂಲಕ ಪೊಲೀಸರನ್ನು ವೇದಿಕೆ ಮೇಲೆ ತಂದಿರು­ವುದು ಪ್ರಶಂಸಾರ್ಹ.  ಮಹತ್ವದ ಪ್ರಕರಣಗಳನ್ನು ಭೇದಿಸುವಲ್ಲಿ ಕೆಳ ಹಂತದ ಸಿಬ್ಬಂದಿ ತೋರಿದ ಶ್ರಮ, ಇಲಾಖೆ ವಿಶ್ವಾಸ ಹೆಚ್ಚಿಸಿದೆ’ ಎಂದರು.

‘ಕರ್ತವ್ಯದ ಅವಧಿಯಲ್ಲಿ ಸಾವನ್ನಪ್ಪುತ್ತಿರುವ ಪೊಲೀಸರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸದಾ ಕ್ಲಿಷ್ಟಕರ ಪರಿಸ್ಥಿತಿಯಲ್ಲೇ ಇರುವ ಪೊಲೀಸರ ಜೀವನ ಒತ್ತಡದಲ್ಲೇ ಕಳೆದು ಹೋಗುತ್ತದೆ.  ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಸಿಬ್ಬಂದಿ ವಾರ ಕಳೆದರೂ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹಬ್ಬ– ಹರಿದಿನ ಸೇರಿದಂತೆ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಪೊಲೀಸರು ದೂರ ಉಳಿಯಬೇಕಾಗುತ್ತದೆ. ಹೀಗೆ ಸಮಸ್ಯೆಗಳ ನಡುವೆ ಕೆಳಹಂತದ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಚಕ್ಷಣಾ ದಳದ ನಿರ್ದೇಶಕ ಬಿ.ಎನ್.ಎಸ್.­ರೆಡ್ಡಿ,‘ಯಾವುದೇ ಪ್ರಕರಣಗಳನ್ನು ಭೇದಿಸು­ವಲ್ಲಿ ಕೆಳ ಹಂತದ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಅದರ ಶ್ರೇಯ ಮಾತ್ರ ಹಿರಿಯ ಅಧಿಕಾರಿಗಳಿಗೆ ಸಲ್ಲುತ್ತದೆ. ಸಾಧನೆ ವಿಷಯದಲ್ಲಿ ಹುದ್ದೆಗಳನ್ನು ಪರಿಗಣಿಸದೆ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ಗೌರವಿಸುವುದು ಮುಖ್ಯ’ ಎಂದರು.

ನಟಿ ಶರ್ಮಿಳಾ ಮಾಂಡ್ರೆ, ‘ಪೊಲೀಸರು ತಮ್ಮ ಕುಟುಂಬ ಸದಸ್ಯರನ್ನು ಮರೆತು ಸಮಾಜದ ರಕ್ಷಣೆಗೆ ನಿಂತಿರುತ್ತಾರೆ. ಅವರೇ ದೇಶದ ನಿಜವಾದ ಹೀರೊಗಳು. ಈ ಗೌರವ ಪೊಲೀಸರಿಗೆ ಮಾತ್ರವಲ್ಲದೆ, ಅವರ ಕುಟುಂಬ ಸದಸ್ಯರಿಗೂ ಸಲ್ಲಬೇಕು’ ಎಂದರು.

ಜನರಿಗೆ ನಮ್ಮ ಪರಿಚಯ ಇಲ್ಲ
‘ನಾನು ಸಿಸಿಬಿ ವಿಶೇಷ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ತಾಂತ್ರಿಕ ವಿಭಾಗದಲ್ಲೇ ಕೆಲಸ ಮಾಡುವುದರಿಂದ ನಮ್ಮ ಪರಿಚಯ ಯಾರಿಗೂ ಇರುವುದಿಲ್ಲ. 2008ರ ನಂತರ ಇದೇ ಮೊದಲ ಬಾರಿಗೆ ಕಾರ್ಯಕ್ರಮವೊಂದಕ್ಕೆ ಹಾಜರಾಗುವ ಅವಕಾಶ ಸಿಕ್ಕಿತು. ಈ ಗೌರವ ವಿಶ್ವಾಸ ಹೆಚ್ಚಿಸಿದೆ’ ಎಂದು ಸೈಕೊ ಶಂಕರ್‌ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ  ಸಿಸಿಬಿಯ ಪಿ.ಎಂ.ಅಶ್ರಫ್‌ ಹೇಳಿದರು.

ಶ್ರಮ ಗುರುತಿಸಿದ ಇಲಾಖೆ
ಕಾಮಾಕ್ಷಿಪಾಳ್ಯದಲ್ಲಿ ಇತ್ತೀಚೆಗೆ ರೇವತಿ ಮತ್ತು ಸರೋಜಮ್ಮ ಎಂಬ ಮಹಿಳೆಯರು ಕೊಲೆಯಾದರು. ಆರೋಪಿಗಳ ಪತ್ತೆಗೆ ರಚಿಸಿದ್ದ ತನಿಖಾ ತಂಡದಲ್ಲಿ ನಾನೂ ಇದ್ದೆ. ಕೊಲೆ ನಡೆದ ಒಂದೆರೆಡು ದಿನಗಳಲ್ಲೇ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದೆವು. ಈಗ ಕೆಳ ಹಂತದ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ.
–ದುರ್ಗರಾಜು, ಕಾಮಾಕ್ಷಿಪಾಳ್ಯ ಠಾಣೆಯ ಎಎಸ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.