ADVERTISEMENT

ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಬೆಂಗಳೂರು: ‘ನಾಡಿನಲ್ಲಿ ಪ್ರಜಾಪ್ರಭುತ್ವವೇ ರಾಜ ಎಂಬುದನ್ನು ತೋರಿಸಿಕೊಡುತ್ತೇನೆ’ ಎಂದು ಗುಡುಗಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ‘ಅಕ್ರಮಗಳಿಂದ ರಾಜ್ಯವನ್ನು ರಕ್ಷಿಸಲು ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸಬೇಕು’ ಎಂದು ಕರೆ ನೀಡಿದರು.

ಇಲ್ಲಿನ ಪುರಭವನದಲ್ಲಿ ಚುನಾವಣಾ ಆಯೋಗ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಮತದಾರರ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ‘ಕಾನೂನಿನ ಆಡಳಿತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ನಾನು ಸಂಪೂರ್ಣ ಬದ್ಧನಾಗಿದ್ದೇನೆ’ ಎಂದರು.

‘ಇಂದು ನನ್ನ ಅಧಿಕಾರ ವ್ಯಾಪ್ತಿಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ, ಅದು ಬೇರೆ ವಿಚಾರ’ ಎಂದ ಭಾರದ್ವಾಜ್, ‘ಎಲ್ಲ ಆಟದಲ್ಲೂ ಅದರದ್ದೇ ಆದ ನಿಯಮಗಳಿರುತ್ತವೆ, ಆ ನಿಯಮದ ಪ್ರಕಾರವೇ ಆಟ ನಡೆಯಬೇಕು. ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಆಟವನ್ನು ನಿರ್ಧರಿಸುವ ನಿಯಮ’ ಎಂದು ಪರೋಕ್ಷವಾಗಿ ಕುಟುಕಿದರು. ಸಂವಿಧಾನ ಎಲ್ಲ ಧರ್ಮದವರಿಗೂ ಪವಿತ್ರ ಗ್ರಂಥ ಎಂದರು.

ಹಣ ಮತ್ತು ತೋಳ್ಬಲವೇ ಪ್ರಜಾಪ್ರಭುತ್ವದ ನಿಜವಾದ ಶತ್ರುಗಳು ಎಂದ ಅವರು ‘ಯುವಜನರ ಭಾಗವಹಿಸುವಿಕೆ ಇಲ್ಲದೆ ಶ್ರೇಷ್ಠ ಆಡಳಿತ ಸಾಧ್ಯವಿಲ್ಲ’ ಎಂದು ಹೇಳಿದರು.

ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ ಮಾತನಾಡಿ, ‘ಮತದಾರರಾದ ನಮ್ಮ ಹಕ್ಕನ್ನು ಪ್ರತಿಪಾದಿಸಬೇಕಾದ ದಿನ ಇದು’ ಎಂದರು.ಹೊಸದಾಗಿ ಮತದಾನದ ಹಕ್ಕು ಪಡೆದವರಿಗೆ ರಾಜ್ಯಪಾಲರು ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿ ವಿತರಿಸಿದರು. ಮತದಾರರ ದಿನಾಚರಣೆಯ ಪ್ರಯುಕ್ತ ಚುನಾವಣಾ ಆಯೋಗ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.