ADVERTISEMENT

ಪ್ರತಿ ಜಿಲ್ಲೆಯಲ್ಲೂ ಕಣ್ಣಿನ ಆಸ್ಪತ್ರೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST
ಪ್ರತಿ ಜಿಲ್ಲೆಯಲ್ಲೂ ಕಣ್ಣಿನ ಆಸ್ಪತ್ರೆ ಅಗತ್ಯ
ಪ್ರತಿ ಜಿಲ್ಲೆಯಲ್ಲೂ ಕಣ್ಣಿನ ಆಸ್ಪತ್ರೆ ಅಗತ್ಯ   

ಬೆಂಗಳೂರು: `ಪ್ರತಿ ಜಿಲ್ಲೆಗಳಲ್ಲಿಯೂ ಕಣ್ಣಿನ ಆಸ್ಪತ್ರೆಗಳನ್ನು ತೆರೆಯಬೇಕು~ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕ ಡಾ. ಶಿವಪ್ರಸಾದ್ ರೆಡ್ಡಿ ಸಲಹೆ ನೀಡಿದರು.

ವಾಸನ್ ಕಣ್ಣಿನ ಆಸ್ಪತ್ರೆ ಮತ್ತು ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಹಾಯಕರ ಸಂಘವು ಜಂಟಿಯಾಗಿ ನಿಮ್ಹಾನ್ಸ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ದೃಷ್ಟಿ ಮಾಪನಕಾರರು ಮತ್ತು ಕನ್ನಡಕ ತಯಾರಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕಣ್ಣು ಮನುಷ್ಯನ ಪ್ರಮುಖವಾದ ಅಂಗಗಳಲ್ಲಿ ಒಂದು. ಕಣ್ಣಿಗೆ ತೊಂದರೆಯಾದರೆ ಇಡೀ ಬದುಕೇ ಅಂಧಕಾರವಾಗುತ್ತದೆ.  ಕಣ್ಣಿನ ಚಿಕಿತ್ಸೆಗೆ ಎಲ್ಲೆಡೆಯೂ ಸೌಲಭ್ಯವನ್ನು ನೀಡುವಂತಾಗಬೇಕು~ ಎಂದರು.

`ಈಗ ಚಿಕ್ಕ ಮಕ್ಕಳಿಗೂ ಹೆಚ್ಚಿನ ದೃಷ್ಟಿದೋಷ ಕಂಡುಬರುತ್ತಿದೆ. ಮಕ್ಕಳಿಗೆ ಸರಿಯಾದ ಚಿಕಿತ್ಸೆಯ ಅವಶ್ಯಕತೆಯಿದೆ. ಅಸಂಖ್ಯಾತ ಮಕ್ಕಳು ತಲೆನೋವು ಮತ್ತು ಕಣ್ಣುರಿಯೆಂದು ಬರುತ್ತಾರೆ. ಅವರಿಗೆ ಸರಿಯಾದ ಕನ್ನಡಕಗಳು ಅಥವಾ ಬೇರೆ ರೀತಿಯ ಚಿಕಿತ್ಸೆಗಳನ್ನು ನೀಡಬೇಕು~ ಎಂದರು.

`ಸಾರ್ವಜನಿಕರಿಗಾಗಿ ವಾಸನ್ ಕಣ್ಣಿನ ಆಸ್ಪತ್ರೆಯು ಈ ರೀತಿಯ ತರಬೇತಿಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಈ ರೀತಿಯ ತರಬೇತಿಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಏರ್ಪಡಿಸಬೇಕು~ ಎಂದು ಸಲಹೆ ನೀಡಿದರು.

`ರೋಗಿಗಳು ದೃಷ್ಟಿ ಮಾಪನಕಾರ ಮತ್ತು ನೇತ್ರ ತಜ್ಞರಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.  ಗ್ರಾಮೀಣ ಭಾಗದಿಂದ ಬರುವ ಜನರಿಗೆ ಚಿಕಿತ್ಸೆಯನ್ನು ಸರಿಯಾದ ಕ್ರಮದಲ್ಲಿ ನೀಡಬೇಕು~ ಎಂದು ವಾಸನ್ ಐ ಕೇರ್ ಆಸ್ಪತ್ರೆಯ ವೈದ್ಯ ಆನಂದ ಹೇಳಿದರು.

ರಾಜ್ಯದ ಗ್ರಾಮೀಣ ವಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕರು ಮತ್ತು ಪ್ರಮುಖ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ದೃಷ್ಟಿ ಮಾಪನಕಾರರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.