ಬೆಂಗಳೂರು: ನಗರದ ಮಹದೇವಪುರ ಮತ್ತು ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕೊಲೆಯಾಗಿದ್ದಾರೆ.
ಶ್ರೀನಗರ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಿಗ್ಗೆ ದುಷ್ಕರ್ಮಿಗಳು ಕುಮಾರ್ (36) ಎಂಬುವರನ್ನು ಕೊಲೆ ಮಾಡಿದ್ದಾರೆ. ಶ್ರೀನಗರದ ಕಾವೇರಿ ನದಿ ರಸ್ತೆ ನಿವಾಸಿಯಾದ ಕುಮಾರ್, ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಓ)ಬಳಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮಕ್ಕಳನ್ನು ಗಿರಿನಗರದ ಶಾಲೆಗೆ ಬಿಟ್ಟು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆಗೆ ಕಾರಣ ಏನೆಂದು ಗೊತ್ತಾಗಿಲ್ಲ ಹಾಗೂ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹನುಮಂತನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣ: ದೇವಸ್ಥಾನವೊಂದರ ಸೆಕ್ಯುರಿಟಿ ಗಾರ್ಡ್‌ನ ಕತ್ತು ಕೊಯ್ದು ಕೊಲೆ ಮಾಡಿದ ದುಷ್ಕರ್ಮಿಗಳು ಹುಂಡಿ ಹಣ ದೋಚಿರುವ ಘಟನೆ ಕಗ್ಗದಾಸಪುರ ರೈಲ್ವೆ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ.
ನೇಪಾಳ ಮೂಲದ ಲಾಲ್ ಬಹದ್ದೂರ್ (35) ಕೊಲೆಯಾದವರು. ಅವರು ಕಗ್ಗದಾಸಪುರ ರೈಲ್ವೆ ಗೇಟ್ ಸಮೀಪ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಎರಡು ತಿಂಗಳುಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಅವರು ದೇವಸ್ಥಾನದ ಆವರಣದಲ್ಲಿನ ಕೊಠಡಿಯಲ್ಲಿ ವಾಸವಾಗಿದ್ದರು.
ರಾತ್ರಿ ದೇವಸ್ಥಾನದ ಬಳಿ ಬಂದಿರುವ ದುಷ್ಕರ್ಮಿಗಳು ಒಳ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕಾವಲು ಕಾಯುತ್ತಿದ್ದ ಲಾಲ್ ಬಹದ್ದೂರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ದೇವಸ್ಥಾನಕ್ಕೆ ನುಗ್ಗಿ ಹುಂಡಿಯಲ್ಲಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಸ್ಥಳೀಯರು ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳವು: ನಂದಿನಿಲೇಔಟ್ ಬಳಿಯ ಬಿಎಚ್‌ಇಎಲ್ ಕಾಲೊನಿ ನಿವಾಸಿ ವಿವೇಕ್‌ಕಾಮತ್ ಎಂಬುವರ ಮನೆಯಲ್ಲಿ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ವಿವೇಕ್‌ಕಾಮತ್ ಅವರು ಶನಿವಾರ (ನ.17) ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಮಂಗಳೂರಿಗೆ ಹೋಗಿದ್ದರು. ದುಷ್ಕರ್ಮಿಗಳು ಈ ಸಂದರ್ಭದಲ್ಲಿ ಅವರ ಮನೆಯ ಕಿಟಕಿ ಸರಳು ಮುರಿದು ಒಳ ನುಗ್ಗಿ ಚಿನ್ನಾಭರಣ ಮತ್ತು ಲ್ಯಾಪ್‌ಟಾಪ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಂದಿನಿಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಯಿ ಮಗಳು ಆತ್ಮಹತ್ಯೆ
ತಾಯಿ ಮತ್ತು ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ರಸ್ತೆ ಬಳಿಯ ಶಂಕರಪ್ಪ ಗಾರ್ಡನ್‌ನಲ್ಲಿ ನಡೆದಿದೆ.
ಶಂಕರಪ್ಪ ಗಾರ್ಡನ್ ಎಂಟನೇ ಅಡ್ಡರಸ್ತೆ ನಿವಾಸಿ ಲಕ್ಷ್ಮೀ (42) ಮತ್ತು ಅವರ ಪುತ್ರಿ ಚೈತ್ರಾ (22) ಆತ್ಮಹತ್ಯೆ ಮಾಡಿಕೊಂಡವರು. ಪತಿಯಿಂದ ದೂರವಾಗಿದ್ದ ಲಕ್ಷ್ಮೀ ಅವರು ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಚೈತ್ರಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅವರು ಮೂರ‌್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮನೆಯ ಒಳ ಭಾಗದಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಠಾಣೆಗೆ ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದರು.
ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ ರಸ್ತೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.