ADVERTISEMENT

ಪ್ರಧಾನಿ ನರೇಂದ್ರ ಮೋದಿ ನನಗಿಂತ ದೊಡ್ಡ ನಟ: ಪ್ರಕಾಶ್ ರೈ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 10:16 IST
Last Updated 2 ಅಕ್ಟೋಬರ್ 2017, 10:16 IST
ಸಮ್ಮೇಳನವನ್ನು ಪ್ರಕಾಶ್ ರೈ ಉದ್ಘಾಟಿಸಿದರು. ಎಂ.ಎಸ್‌.ಮೀನಾಕ್ಷಿ ಸುಂದರಂ, ಮಹಮದ್ ರಿಯಾಜ್‌, ಡಿವೈಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ, ಕಾರ್ಮಿಕ ಮುಖಂಡ ಆರ್.ಶ್ರೀನಿವಾಸ್‌, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಇದ್ದಾರೆ –ಪ್ರಜಾವಾಣಿ ಚಿತ್ರ
ಸಮ್ಮೇಳನವನ್ನು ಪ್ರಕಾಶ್ ರೈ ಉದ್ಘಾಟಿಸಿದರು. ಎಂ.ಎಸ್‌.ಮೀನಾಕ್ಷಿ ಸುಂದರಂ, ಮಹಮದ್ ರಿಯಾಜ್‌, ಡಿವೈಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ, ಕಾರ್ಮಿಕ ಮುಖಂಡ ಆರ್.ಶ್ರೀನಿವಾಸ್‌, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೌರಿ ಲಂಕೇಶ್‌ ಅವರನ್ನು ಕೊಂದವರು ಯಾರು ಎಂಬ ಸುಳಿವು ಸಿಕ್ಕಿಲ್ಲ. ಆದರೆ, ಈ ಸಾವನ್ನು ಸಂಭ್ರಮಿಸುತ್ತಿರುವ ವಿಕೃತ ಮನಸ್ಸಿನವರು ನಮ್ಮ ಕಣ್ಣಿಗೆ ಕಾಣುತ್ತಿದ್ದಾರೆ. ಈ ಹತ್ಯೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ನಟ ಪ್ರಕಾಶ್‌ ರೈ ಟೀಕಿಸಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘11ನೇ ರಾಜ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಗೌರಿ ಹತ್ಯೆಯನ್ನು ಸಂಭ್ರಮಿಸಿ ಕೆಲವರು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಅವರ ಒಳಗೆ ಅಡಗಿರುವ ಕ್ರೌರ್ಯ ಏನೆಂಬುದು ಇದರಿಂದ ಗೊತ್ತಾಗುತ್ತದೆ. ಈ ವಿಷಯದಲ್ಲಿ ಪ್ರಧಾನಿ ಮೋದಿ ಮೌನವಹಿಸಿದ್ದಾರೆ. ಅವರು ನನಗಿಂತಲೂ ದೊಡ್ಡ ನಟ’ ಎಂದು ಪ್ರಕಾಶ್ ರೈ ವ್ಯಂಗ್ಯವಾಡಿದರು.

ADVERTISEMENT

‘ಮುದುಕ ರಾಜಕಾರಣಿಗಳಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ. ಅವರಿಗೆ ಭಯ, ಹೊಂದಾಣಿಕೆ ಸಾಮಾನ್ಯ. ಅವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಯುವ ನಾಯಕರಿಂದ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ರಾಜಕೀಯ ಸುಧಾರಣೆ ಆಗಬೇಕಾದರೆ ಯುವ ನಾಯಕರು ಹುಟ್ಟಿಕೊಳ್ಳಬೇಕು. ಈಗಿರುವ ಒಬ್ಬ ನಾಯಕನೂ ಇರಬಾರದು’ ಎಂದು ದೂರಿದರು.

‘ಇಂದಿನ ಎಲ್ಲಾ ಸಮಸ್ಯೆಗಳಿಗೆ ದೇಶದ ಪ್ರತಿಯೊಬ್ಬರ ಮೂರ್ಖತನವೇ ಕಾರಣ. ಪ್ರತಿಯೊಬ್ಬ ಮತದಾರ ಮೂರ್ಖ. ಚುನಾವಣೆ ಎನ್ನುವ ಪರೀಕ್ಷೆಯಲ್ಲಿ ಮೂರ್ಖರು ತೀರ್ಪು ನೀಡಿದರೆ ಕೆಟ್ಟವರೇ ಗೆಲ್ಲುತ್ತಾರೆ’ ಎಂದು ಹೇಳಿದರು.

ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮಹಮದ್‌ ರಿಯಾಜ್‌, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪೆಟ್ರೊಲ್‌, ಡೀಸೆಲ್‌ ಬೆಲೆ ಕಡಿಮೆ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದ್ದರು. ಆದರೆ, ಈಗ ಪೆಟ್ರೊಲ್‌, ಡೀಸೆಲ್‌ ಬೆಲೆ ಕಡಿಮೆ ಆಗಿದೆಯೇ’ ಎಂದು ಪ್ರಶ್ನಿಸಿದರು.

‘ಬುಲೆಟ್‌ ರೈಲಿನ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಮುಂಬೈ ಎಲ್ಫಿನ್‌ಸ್ಟನ್‌ ರೈಲ್ವೆ ನಿಲ್ದಾಣದಲ್ಲಿ  ಕಾಲ್ತುಳಿತಕ್ಕೆ 23 ಮಂದಿ ಬಲಿಯಾಗಿರುವುದೇ ಇದಕ್ಕೆ ಸಾಕ್ಷಿ’ ಎಂದು ದೂರಿದರು.

‘ಬುಲೆಟ್‌ ರೈಲು ಯೋಜನೆ ಅನುಷ್ಠಾನಕ್ಕಾಗಿ ಭಾರತವು ಜಪಾನ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. . ಆದರೆ, ಈ ಒಪ್ಪಂದದ ಮೊತ್ತಕ್ಕಿಂತ ಕಾಲು ಭಾಗದ ಹಣದಲ್ಲಿ ಚೀನಾದಲ್ಲಿ ಬುಲೆಟ್‌ ರೈಲನ್ನು ಓಡಿಸಲಾಗುತ್ತಿದೆ’ ಎಂದರು.

30ರಂದು ಜ್ಯೋತಿ ಬೆಳಗಿಸುವ ಕಾರ್ಯಕ್ರಮ: ‘ನಿರುದ್ಯೋಗ, ಉದ್ಯೋಗ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಧರ್ಮದ ಮೂಲಭೂತವಾದವನ್ನು ಬೆರೆಸಲಾಗುತ್ತಿದೆ. ಈ ಮೂಲಕ ನಮ್ಮೊಳಗೇ ದ್ವೇಷ ಹುಟ್ಟುವಂತೆ ಮಾಡಲಾಗುತ್ತಿದೆ. ದೇಶವನ್ನು ವಿದೇಶಿ ಬಂಡವಾಳಗಾರರಿಗೆ ಒತ್ತೆ ಇಡುವುದನ್ನು ಖಂಡಿಸಿ ಇದೇ 30ರಂದು ರಾಷ್ಟ್ರದಾದ್ಯಂತ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಮೀನಾಕ್ಷಿ ಸುಂದರಂ ತಿಳಿಸಿದರು.

ಮೈಸೂರು ಬ್ಯಾಂಕ್‌ ವೃತ್ತದಲ್ಲಿರುವ ಹುತಾತ್ಮ ಸ್ತಂಭದಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಭವನದವರೆಗೆ ಸೌಹಾರ್ದ ಮೆರವಣಿಗೆ ನಡೆಯಿತು.

**

ನೀವು ರಾಜಕೀಯಕ್ಕೆ ಬರುತ್ತೀರಾ ಎಂದು ಪತ್ರಕರ್ತರು ಕೇಳುತ್ತಾರೆ. ಇದಕ್ಕೆ ಉತ್ತರ ನೀಡಿದರೆ ಅದು ಮುಖಪುಟ ಸುದ್ದಿಯಾಗುತ್ತದೆ. ನಟನಾದ ಮಾತ್ರಕ್ಕೆ ದೇಶದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಆತನಲ್ಲಿ ಇರುತ್ತದೆಯೇ?

–ಪ್ರಕಾಶ್‌ ರೈ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.