ADVERTISEMENT

ಪ್ರಭಾವಿ ಕ್ಷೇತ್ರಗಳಲ್ಲೇ ಸೋತ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 6:30 IST
Last Updated 5 ಜನವರಿ 2011, 6:30 IST
ಪ್ರಭಾವಿ ಕ್ಷೇತ್ರಗಳಲ್ಲೇ ಸೋತ ಬಿಜೆಪಿ
ಪ್ರಭಾವಿ ಕ್ಷೇತ್ರಗಳಲ್ಲೇ ಸೋತ ಬಿಜೆಪಿ   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಭಾವಿ ಸಚಿವರ ಕ್ಷೇತ್ರಗಳಲ್ಲೇ ಬಿಜೆಪಿ ಮುಗ್ಗರಿಸಿದೆ. ಇಂಧನ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದ್ದರೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರವೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಈ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಎರಡು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿವೆ. ಇಲ್ಲಿ ಬಿಜೆಪಿ ಒಂದೇ ಸ್ಥಾನಕ್ಕೆ ಕುಗ್ಗಿರುವುದರಿಂದ ಶೋಭಾ ಅವರ ವರ್ಚಸ್ಸಿಗೆ ಬಲವಾದ ಪೆಟ್ಟು ಬಿದ್ದಂತಾಗಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿಯ 10 ಕ್ಷೇತ್ರಗಳಿವೆ. ಈ ಪೈಕಿ ಐದು ಕಾಂಗ್ರೆಸ್ ಪಾಲಾಗಿದ್ದರೆ, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಬಿಜೆಪಿ ಮೂರು ಸ್ಥಾನಕ್ಕೆ ಸೀಮಿತವಾಗಿದೆ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲೂ ಶೋಭಾ ಅವರ ಪ್ರಭಾವ ಕೆಲಸ ಮಾಡಿದಂತಿಲ್ಲ.

ADVERTISEMENT

ನಾರಾಯಣಸ್ವಾಮಿಗೆ ಸಿಹಿ-ಕಹಿ: ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಪ್ರತಿನಿಧಿಸುವ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸಿಹಿ-ಕಹಿ ಎರಡೂ ದಕ್ಕಿದೆ. ಅಲ್ಲಿ ಜಿಲ್ಲಾ ಪಂಚಾಯಿತಿಯ 14 ಸ್ಥಾನಗಳ ಪೈಕಿ ಏಳರಲ್ಲಿ ಬಿಜೆಪಿ ಗೆದ್ದಿದೆ. ಉಳಿದ ಏಳು ಕಾಂಗ್ರೆಸ್ ಪಾಲಾಗಿವೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಬಲ ಹೆಚ್ಚಿದೆ.

ಆದರೆ ಆನೇಕಲ್ ತಾಲ್ಲೂಕು ಪಂಚಾಯಿತಿ ಬಿಜೆಪಿಯ ವಶವಾಗಿದೆ. 27 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ವಿಜಯದ ನಗೆ ಬೀರಿದೆ. ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಗೆದ್ದಿದ್ದರೆ, ಜೆಡಿಎಸ್ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ.

ಲಿಂಬಾವಳಿ ಮೇಲುಗೈ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಈ ಬಾರಿ ಮೇಲುಗೈ ಸಾಧಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಏಳು ಸ್ಥಾನಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಆರು ವಾರ್ಡ್‌ಗಳು ಕಾಂಗ್ರೆಸ್ ಪಾಲಾಗಿದ್ದವು. ಆದರೆ ಈ ಬಾರಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಎರಡರಲ್ಲೂ ಪ್ರಾಬಲ್ಯ ಮೆರೆದಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮೂರು ಕ್ಷೇತ್ರಗಳಿವೆ. ಎರಡರಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ, ಒಂದು ಕಾಂಗ್ರೆಸ್ ಪಾಲಾಗಿದೆ. ತಾಲ್ಲೂಕು ಪಂಚಾಯಿತಿಯ 11 ಕ್ಷೇತ್ರಗಳಲ್ಲಿ ಎಂಟು ಕಡೆ ಗೆಲುವು ಸಾಧಿಸುವ ಮೂಲಕ ಬಹುಮತ ಪಡೆದಿದೆ. ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಉತ್ತರದಲ್ಲಿ ಸಮಬಲ: ಯಲಹಂಕ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿರುವ ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಸಮಬಲ ಸಾಧಿಸಿವೆ. 11 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಐದು ಬಿಜೆಪಿಗೆ ದಕ್ಕಿವೆ. ನಾಲ್ಕು ಕಾಂಗ್ರೆಸ್ ಪಾಲಾಗಿದ್ದರೆ, ಎರಡು ಜೆಡಿಎಸ್ ಮಡಿಲಿಗೆ ಹೋಗಿವೆ. ಇಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ಎರಡನೇ ಬಾರಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗುವಲ್ಲಿ ಯಶಸ್ವಿ ಆಗಿದ್ದಾರೆ.

ಉತ್ತರ ತಾಲ್ಲೂಕು ಪಂಚಾಯಿತಿಯ 22 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಒಂಬತ್ತು ಕಡೆ ಗೆಲುವು ಸಾಧಿಸಿದೆ. ಕಾಂಗ್ರೆಸ್ 8 ಮತ್ತು ಜೆಡಿಎಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮೈತ್ರಿ ಮೂಲಕ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.