ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕಾಯುವ ಸಮಯವನ್ನು ತಗ್ಗಿಸಲು ವಿನೂತನ ಎರಡು ಯೋಜನೆಗಳನ್ನು ಬೆಂಗಳೂರು ಕಸ್ಟಮ್ಸ ಜಾರಿಗೆ ತಂದಿದೆ.
ಪ್ರಯಾಣಿಕರಲ್ಲಿ ಅಧಿಕ ಮೌಲ್ಯದ ಸರಕುಗಳಿದ್ದು, ವಾಪಸ್ ಬರುವಾಗ ಅದನ್ನು ತರಬೇಕೆಂದು ಬಯಸಿದರೆ, ಆನ್‌ಲೈನ್‌ನಲ್ಲಿಯೇ ರಫ್ತು ಪ್ರಮಾಣಪತ್ರ ಪಡೆದು ವಿಮಾನನಿಲ್ದಾಣದಲ್ಲಿ ಸಮಯ ವ್ಯಯ ಮಾಡುವ ಸಮಸ್ಯೆಯಿಂದ ಮುಕ್ತರಾಗಬಹುದು.
ವೆಬ್‌ಸೈಟ್‌ಗೆ ಹೋಗಿ ನಿಗದಿತ ನಮೂನೆಯ ಅರ್ಜಿ ಭರ್ತಿ ಮಾಡಿ ಅದರ ಪ್ರತಿಯನ್ನು ಇಟ್ಟುಕೊಂಡು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸನಿಂದ ಒಪ್ಪಿಗೆ ಪಡೆಯಬೇಕು. ಇದಕ್ಕಾಗಿಯೇ ಬೆಂಗಳೂರು ಕಸ್ಟಮ್ಸ ಇಲಾಖೆ ತನ್ನ www.bangalorecustoms.gov.in ವೆಬ್‌ಸೈಟ್‌ನಲ್ಲಿ ಸ್ಮಾರ್ಟ್ ಪ್ರೊಸೆಸಿಂಗ್ ಪುಟ ತೆರೆದಿದ್ದು, ರಫ್ತು ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳ, ತ್ವರಿತ ಮತ್ತು ಅನುಕೂಲಕರವಾಗಿ ರೂಪಿಸಿದೆ.
ಕೊರಿಯರ್ ಮೂಲಕ ಸರಕು ಕಳಿಸುವವರು/ಆಮದುದಾರರು ತಮ್ಮ ಸರಕು ಎಲ್ಲಿದೆ ಎಂಬುದರ ಮಾಹಿತಿ ಪಡೆಯಲು ನೆರವಾಗಲು ಬೆಂಗಳೂರು ಕಸ್ಟಮ್ಸ ವೆಬ್‌ಸೈಟಿನಲ್ಲಿ ಲಿಂಕ್ ನೀಡಲಾಗಿದೆ. ಇದರಿಂದ ಗ್ರಾಹಕರು ಏರ್‌ವೇ ಬಿಲ್ ಸಂಖ್ಯೆಯನ್ನು ಭರ್ತಿ ಮಾಡಿ ನೈಜ ಅವಧಿಯ ಮಾಹಿತಿಯನ್ನು ಪಡೆಯಬಹುದು. ಒಂದು ಪಕ್ಷ ಕಸ್ಟಮ್ಸ ಅಧಿಕಾರಿಗಳು ಆಕ್ಷೇಪ ಎತ್ತಿದ್ದರೆ ಅದಕ್ಕೂ ಉತ್ತರ ನೀಡಬಹುದು. ಇದರಿಂದಾಗಿ ಗ್ರಾಹಕರು ವಿಮಾನನಿಲ್ದಾಣವನ್ನು ತಲುಪದೆಯೇ ಕೊರಿಯರ್ ಕಂಪೆನಿಯ ಮೂಲಕ ಕಸ್ಟಮ್ಸಗೆ ಸ್ಪಷ್ಟನೆ ನೀಡಲು ಸಾಧ್ಯವಾಗುತ್ತದೆ.
ಕಸ್ಟಮ್ಸ ಆಯುಕ್ತ ಸಂದೀಪ್ ಪ್ರಕಾಶ್ ಈ ಬಗ್ಗೆ ಮಾಹಿತಿ ನೀಡಿ, `ಈ ಎರಡು ಯೋಜನೆಗಳು ದೇಶದ ವಿಮಾನನಿಲ್ದಾಣಗಳಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿವೆ. ಪ್ರಕ್ರಿಯೆಗಳನ್ನು ಸರಳ ಮತ್ತು ಪಾರದರ್ಶಕಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರು ವಿಮಾನನಿಲ್ದಾಣದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಬಹುದು.
ವಿಮಾನ ನಿಲ್ದಾಣದ ಆಪರೇಷನ್ಸ್ ಅಧ್ಯಕ್ಷ ಹರಿ ಮರಾರ್ ಮಾತನಾಡಿ, `ವಿಮಾನ ನಿಲ್ದಾಣದ ಕ್ಷಮತೆಯನ್ನು ಸುಧಾರಿಸುವುದು ನಮ್ಮ ಪ್ರಮುಖ ಆದ್ಯತೆ. ಇದನ್ನು ಕಾರ್ಯಗತಗೊಳಿಸಲು ನಮ್ಮ ಸಹಭಾಗಿದಾರರು ಮತ್ತು ಷೇರುದಾರರ ಸಹಕಾರ ಅಗತ್ಯ. ಅವರು ನಮ್ಮ ಉದ್ದೇಶದ ಈಡೇರಿಕೆಗೆ ಬದ್ಧತೆ ವ್ಯಕ್ತಪಡಿಸಬೇಕು' ಎಂದರು.
ರಫ್ತು ಪ್ರಮಾಣಪತ್ರ: ರಫ್ತು ಪ್ರಮಾಣಪತ್ರದ ಅರ್ಜಿ ನಮೂನೆ ಆಯುಕ್ತರ ಕಚೇರಿ www.bangalorecustoms.gov.in ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ರೂಪಿಸಲಾದ ಎಕ್ಸ್‌ಪೋರ್ಟ್ ಸರ್ಟಿಫಿಕೇಟ್ ಲಿಂಕ್‌ನಲ್ಲಿ ಲಭ್ಯ ಇದೆ. ಇದನ್ನು ಪ್ರಯಾಣಿಕರು ಡೌನ್‌ಲೋಡ್ ಮಾಡಿ ವಿವರಗಳನ್ನು ಭರ್ತಿ ಮಾಡಿ acairportbangalore@gmail.com ಇಮೇಲ್ ವಿಳಾಸಕ್ಕೆ ಪ್ರಯಾಣದ 24 ಗಂಟೆ ಮೊದಲು ಮೇಲ್ ಮಾಡಬೇಕು. ಪ್ರಯಾಣಿಕರು ತಾವು ಭರ್ತಿ ಮಾಡಿದ ಅರ್ಜಿಯ ಹಾರ್ಡ್ ಕಾಪಿಯ ಪ್ರಿಂಟ್ ಪಡೆದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಬೇಕು.
ರಫ್ತು ಪ್ರಮಾಣಪತ್ರವನ್ನು ಅಧಿಕ ಮೌಲ್ಯದ ಸರಕುಗಳನ್ನು ವಿದೇಶಕ್ಕೆ ಕೊಂಡೊಯ್ದು ವಾಪಸ್ ತರಲು ಇಚ್ಛಿಸುವ ಪ್ರಯಾಣಿಕರಿಗೆ ನೀಡಲಾಗುತ್ತದೆ. ಇದನ್ನು ವಾಪಸ್ ತರುವ ವಸ್ತುಗಳ ಮೇಲಷ್ಟೇ ನೀಡಲಾಗುವುದರಿಂದ ವಾಪಸ್ ತರುವ ಸರಕುಗಳ ಮೇಲೆ ಆಮದು ಸುಂಕ ವಿಧಿಸಲಾಗುವುದಿಲ್ಲ. ಹಾಲಿ ಇರುವ ವ್ಯವಸ್ಥೆಯ ಜೊತೆಗೆ ಈಗ ಆನ್‌ಲೈನ್ ಸೌಲಭ್ಯವನ್ನು ಜಾರಿ ಮಾಡಲಾಗಿದೆ. ಪ್ರಸ್ತುತ ಕ್ವೀನ್ಸ್ ರಸ್ತೆಯ ಕಸ್ಟಮ್ಸ ಕಚೇರಿ ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.
ಕೊರಿಯರ್ ಸರಕು ಮಾಹಿತಿಯು www.bangalorecustoms.gov.in ವೆಬ್‌ಸೈಟ್‌ನಲ್ಲಿ ಇರುವ ಪ್ರತ್ಯೇಕ ಕೊರಿಯರ ಅಸೆಸ್‌ಮೆಂಟ್ ಲಿಂಕ್‌ನಲ್ಲಿ ದೊರಕುತ್ತದೆ. ಕೊರಿಯರ್ ಆಮದುದಾರರು ಈ ಲಿಂಕ್ ಕ್ಲಿಕ್ ಮಾಡಿ ಏರ್‌ವೇ ಬಿಲ್ ಸಂಖ್ಯೆ ಭರ್ತಿ ಮಾಡಿ ಮಾಹಿತಿ ಪಡೆಯಬಹುದು. ಸರಕಿನ ಬಗ್ಗೆ ಯಾವುದೇ ಆಕ್ಷೇಪಗಳಿದ್ದರೆ ಅದಕ್ಕೆ ಸ್ಪಷ್ಟನೆ ನೀಡಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗೆ: ಕೆ.ವಿ.ವಿ.ಜಿ ದಿವಾಕರ್, ಹೆಚ್ಚುವರಿ ಕಸ್ಟಮ್ಸ ಆಯುಕ್ತರು (9448118917).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.