ಬೆಂಗಳೂರು: ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಪದೇ ಪದೇ ಪ್ರವಾಹಕ್ಕೆ ಕಾರಣವಾಗುವ ಡೋಣಿ ಮತ್ತು ಬೆಣ್ಣೆಹಳ್ಳ ನದಿಗಳ ನೀರನ್ನು ಕೃಷ್ಣೆ ಹಾಗೂ ಭೀಮಾ ನದಿಗೆ ಹರಿಸಿ ಪ್ರವಾಹ ನಿಯಂತ್ರಿಸುವ ಯೋಜನೆಯನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ನಿಯಮ 69ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಎಂ.ಬಿ.ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ, ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿ, ಶ್ರೀಕಾಂತ ಕುಲಕರ್ಣಿ ಮತ್ತಿತರರು, ತಕ್ಷಣವೇ ಡೋಣಿ ನದಿ ಪ್ರವಾಹ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸುವಂತೆ ಆಗ್ರಹಿಸಿದರು. ಬೆಣ್ಣೆಹಳ್ಳವನ್ನೂ ಯೋಜನೆಯ ವ್ಯಾಪ್ತಿಗೆ ತರುವಂತೆ ನಡಹಳ್ಳಿ ಸಲಹೆ ಮಾಡಿದರು.
`ಎರಡೂ ನದಿಗಳಲ್ಲಿ ಅಕಾಲಿಕ ಪ್ರವಾಹ ಬರುತ್ತದೆ. ಇದರಿಂದ ಪ್ರತಿ ವರ್ಷವೂ ನೂರಾರು ಕೋಟಿ ರೂಪಾಯಿ ಮೊತ್ತದ ಬೆಳೆ ಹಾನಿಯಾಗುತ್ತದೆ. ನದಿ ತೀರದ ಜನರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ನದಿ ಪಾತ್ರದಲ್ಲಿ ಹೂಳು ತುಂಬಿರುವುದು, ದಟ್ಟವಾಗಿ ಜಾಲಿ ಗಿಡಗಳು ಬೆಳೆದಿರುವುದು ಸಮಸ್ಯೆಗೆ ಕಾರಣ. ಈ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ಪರಿಹಾರ ಯೋಜನೆ ರೂಪಿಸಬೇಕು~ ಎಂದು ಶಾಸಕರು ಆಗ್ರಹಿಸಿದರು.
ಈ ಚರ್ಚೆಗೆ ಉತ್ತರ ನೀಡಿದ ಬೊಮ್ಮಾಯಿ, `ಡೋಣಿ ಮತ್ತು ಬೆಣ್ಣೆಹಳ್ಳ ನದಿಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಎರಡೂ ಕಡೆಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಒಂದೇ ಮಾದರಿಯ ಯೋಜನೆ ರೂಪಿಸುವ ಅಗತ್ಯವಿದೆ. ಈ ನದಿಗಳ ನೀರನ್ನು ಭೀಮಾ ಮತ್ತು ಕೃಷ್ಣಾ ನದಿಗೆ ತಿರುಗಿಸುವುದೂ ಸೇರಿದಂತೆ ಹಲವು ಪ್ರಸ್ತಾವಗಳು ಸರ್ಕಾರದ ಮುಂದಿವೆ. ನೀರಾವರಿ ತಜ್ಞ ಬಿ.ಎಸ್.ಪರಮಶಿವಯ್ಯ ನೇತೃತ್ವದ ಸಮಿತಿ ಈ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ~ ಎಂದರು.
`ಪ್ರವಾಹ ನಿಯಂತ್ರಣ ಯೋಜನೆ ಕುರಿತು ಶೀಘ್ರದಲ್ಲಿ ಆ ಭಾಗದ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸುತ್ತೇನೆ. ಸಮಗ್ರ, ಶಾಶ್ವತ ಯೋಜನೆಯನ್ನು ರೂಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಜಲಾನಯನ ಇಲಾಖೆಯನ್ನೂ ಈ ಯೋಜನೆಗೆ ಬಳಸಿಕೊಳ್ಳಲಾಗುವುದು. ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿದ ಬಳಿಕ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುವುದು~ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.