ADVERTISEMENT

ಪ್ರೀತಿಯಿಂದ ಪ್ರಗತಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಬೆಂಗಳೂರು: `ಮಂತ್ರಿಗಳು ಅಧಿಕಾರಿಗಳನ್ನು ಪ್ರೀತಿಯಿಂದ ಕಂಡಾಗ ಇಲಾಖೆಗಳಲ್ಲಿ ಪ್ರಗತಿ ಕಾಣಲು ಸಾಧ್ಯ~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸಮಾಜ ಕಲ್ಯಾಣ ಇಲಾಖೆಯ `ಸಮಾಜ ಕಲ್ಯಾಣ ವಾರ್ತೆ~ ತ್ರೈ ಮಾಸಿಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, `ಕೇವಲ ಅಧಿಕಾರಿಗಳ  ಮೇಲೆ ಕೋಪ ಮಾಡಿಕೊಳ್ಳುವುದರಿಂದ ಇಲಾಖೆಗಳಲ್ಲಿ ಯಾವುದೇ ಹೊಸ ಬದಲಾವಣೆಗಳು ಸಾಧ್ಯವಿಲ್ಲ. ಮಂತ್ರಿಗಳು ಅಧಿಕಾರಿಗಳ ಮನಃಪರಿವರ್ತನೆಯ ಮೂಲಕ ಇಲಾಖೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲ ಮಂತ್ರಿಗಳೂ ಯೋಚಿಸಬೇಕು~ ಎಂದರು.

`ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಳಿದ ಇಲಾಖೆಗಳ ಅಧಿಕಾರಿಗಳಿಗಿಂತಲೂ ಭಿನ್ನವಾದ ವ್ಯಕ್ತಿತ್ವ ಹೊಂದಬೇಕಾಗುತ್ತದೆ. ಇಲಾಖೆಯ ಹೆಸರೇ ಹೇಳುವಂತೆ ಸಮಾಜ ಕಲ್ಯಾಣದ ಕೆಲಸಕ್ಕೆ ಸೇವಾ ಮನೋಭಾವವನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು. ತಳ ಸಮುದಾಯದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೊಂದಿ ಅಧಿಕಾರಿಗಳು ಕೆಲಸ ಮಾಡಬೇಕು~ ಎಂದು ಅವರು ಸೂಚನೆ ನೀಡಿದರು.

ತ್ರೈಮಾಸಿಕ ಬಗ್ಗೆ ಮಾತನಾಡಿದ ಅವರು, `ಸಮಾಜ ಕಲ್ಯಾಣ ಇಲಾಖೆಯ ಮಾಹಿತಿಗಳನ್ನು ಒಳಗೊಂಡ ತ್ರೈಮಾಸಿಕ ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಉಪಯುಕ್ತವಾಗಿದೆ. ಇಲಾಖೆಯ ಪ್ರಗತಿ ಹಾಗೂ ಯೋಜನೆಗಳ ಬಗ್ಗೆಯೂ ಈ ಪತ್ರಿಕೆಯಲ್ಲಿ ಪ್ರಕಟಿಸುವ ಕೆಲಸವಾಗಬೇಕು. ಸರ್ಕಾರಿ ಆದೇಶ ಹಾಗೂ ಅಧಿಸೂಚನೆಗಳನ್ನು ಪ್ರಕಟಿಸಲು ಪತ್ರಿಕೆಯನ್ನು ಬಳಸಿಕೊಳ್ಳಬೇಕು~ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ನವೀನ್ ರಾಜ್ ಸಿಂಹ ಮಾತನಾಡಿ, `ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಇಲಾಖೆಯ ಬೆಳವಣಿಗೆಗೆ ಅಧಿಕಾರಿಗಳು ಮುಂದಾಗಬೇಕು. ಕಂಪ್ಯೂಟರ್‌ನ ಸಮರ್ಥ ಬಳಕೆಯಿಂದ ಇಲಾಖೆಯಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ. ಇಲಾಖೆಯ ಪ್ರಗತಿ ಹಾಗೂ ಕೌಶಲ್ಯ ವೃದ್ಧಿಗಾಗಿ ಎಲ್ಲ ಅಧಿಕಾರಿಗಳೂ ಆಧುನಿಕ ತಂತ್ರಜ್ಞಾನಗಳನ್ನು ತಮ್ಮ ಕೆಲಸಗಳಲ್ಲಿ ಅಳವಡಿಸಿಕೊಳ್ಳಬೇಕು~ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎನ್. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.