ADVERTISEMENT

ಬಂಗಾಳದ ಗೊರವಯ್ಯ...

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 20:40 IST
Last Updated 14 ಫೆಬ್ರುವರಿ 2011, 20:40 IST

ಬೆಂಗಳೂರು: ‘ರವೀಂದ್ರನಾಥ ಟ್ಯಾಗೋರ್ ಅವರ ಪೂರ್ಣ ವ್ಯಕ್ತಿತ್ವ, ಚಿಂತನೆಗಳಲ್ಲಿದ್ದ ಆಧ್ಯಾತ್ಮಿಕ ಮನೋಭಾವ, ಬದುಕಿನ ರಸಾನುಭಾವ ಈ ಎಲ್ಲಾ ಅಂಶಗಳು ಸಮುದಾಯ ಸಂಘಟನೆ, ‘ಪ್ರಜಾವಾಣಿ’ ಸಹಯೋಗದಲ್ಲಿ ‘ಟ್ಯಾಗೋರ್ 150 ಸಮುದಾಯ ರಾಷ್ಟ್ರೀಯ ಉತ್ಸವದ’ ಪ್ರಯುಕ್ತ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ವ್ಯಕ್ತವಾಯಿತು.

‘ಬಂಗಾಳದ ಗೊರವಯ್ಯ ನಮ್ಮ ಕೇರಿಗೆ ಬಾರಯ್ಯ, ಆ ಕಾಲ ಈ ಕಾಲ ಎಲ್ಲಾಕ್ಕು, ನನ್ನಜ್ಜ ಗೊರವಯ್ಯನ ಹಾಗೇ ಕಾಣುವ ಮುಖ, ಇರಬಹುದೇ ಹಾಗೇ ಕೈವಾರನ ತಾತಯ್ಯನ ಹಾಗೇ.... ಗಂಗಪ್ಪ ತಳವಾರ ಅವರ ಕವಿತೆಯಲ್ಲಿ ಈ ನೆಲದ ಕೈವಾರ ತಾತಯ್ಯನೊಂದಿಗೆ ಟ್ಯಾಗೋರ್ ವ್ಯಕ್ತಿತ್ವವನ್ನು ಸಮೀಕರಿಸುತ್ತಿತ್ತು.

‘ಬರೆಯುವ ಒತ್ತಡಕ್ಕೆ  ಒಳಗಾಗುವವರು ಮತ್ತು ಒತ್ತಾಯಕ್ಕೆ ಒಳಗಾಗಿ ಬರೆಯುವವರ ನಡುವೆ ಭಿನ್ನತೆಯಿದೆ. ಈ ಗೋಷ್ಠಿಯಲ್ಲಿ ಎಲ್ಲಾ ಕವಿಗಳು ಅಂತರಂಗದ ಒತ್ತಡದಿಂದ ಕವಿತೆಗಳನ್ನು ಬರೆದು ವಾಚಿಸಿದ್ದಾರೆ’ ಎಂದು ಸಮುದಾಯ ರಾಜ್ಯ ಸಮಿತಿಯ ಉಪಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಅವರು ಶ್ಲಾಘಿಸಿದರು.
‘ಕಾವ್ಯ ಕಟ್ಟುತ್ತಾ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು.  ಮನಸ್ಸು ಮತ್ತು ಅನುಭವ ಎರಡು ಸಮ್ಮಿಳಿತಗೊಂಡಾಗ ಮಾತ್ರ ಕಾವ್ಯ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯ’ ಎಂದು ಹೇಳಿದರು.

ಟ್ಯಾಗೋರ್ ಜೀವನ ಘಟನೆಗಳ ಕುರಿತು ಹೆಣೆದ ಕವಿತೆಗಳನ್ನು ಕವಿಗಳು ವಾಚಿಸಿದರು. ಗೋಷ್ಠಿಯಲ್ಲಿ ಪ್ರೊ. ಮೀರಾ ಚಕ್ರವರ್ತಿ, ಡಾ. ರಂಗನಾಥ ಕಂಟನ ಕುಂಟೆ, ಹುಲಿಕಟ್ಟೆ ಚನ್ನಬಸಪ್ಪ, ಲಕ್ಕೂರು ಸಿ.ಆನಂದ, ಎಸ್.ದೇವೇಂದ್ರ ಗೌಡ, ಮಂಜುನಾಥ್ ಎಸ್. ಶ್ವೇತಾಮಣಿ, ಡಾ.ರವಿಕುಮಾರ್ ಬಾಗಿ, ಟಿ.ಲಕ್ಷ್ಮೀನಾರಾಯಣ, ಎಸ್. ನರಸಿಂಹಸ್ವಾಮಿ, ಆರ್.ದೇವರಾಜ್, ಹುಲಿಕುಂಟೆ ಮೂರ್ತಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.