ADVERTISEMENT

ಬಂಡಾಯದ ಭೀತಿಯಲ್ಲಿ ಕಾಂಗ್ರೆಸ್

ಹೆಬ್ಬಾಳ, ರಾಜರಾಜೇಶ್ವರಿ ನಗರ: ಟಿಕೆಟ್ ಘೋಷಣೆಗೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:52 IST
Last Updated 14 ಏಪ್ರಿಲ್ 2013, 19:52 IST

ಬೆಂಗಳೂರು: ಅಳೆದೂ ತೂಗಿ 38 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಳಿಕವೂ ನಗರದ ಹೆಬ್ಬಾಳ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ಹಿಂದೇಟು ಹಾಕಿದೆ. ಎರಡೂ ಕಡೆಗಳಲ್ಲಿ ಪಕ್ಷ ಪ್ರಬಲವಾದ ಬಂಡಾಯದ ಭೀತಿ ಎದುರಿಸುತ್ತಿದೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಟಿಕೆಟ್ ಆಕಾಂಕ್ಷಿಗಳು. ರೇವಣ್ಣ ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈಗ ಅಬ್ದುಲ್ ರೆಹಮಾನ್ ಷರೀಫ್‌ಗೆ ಟಿಕೆಟ್ ದೊರೆಯುವ ಸಾಧ್ಯತೆಯನ್ನು ಮನಗಂಡಿರುವ ರೇವಣ್ಣ, ಬಂಡಾಯದ ಮುನ್ಸೂಚನೆ ನೀಡಿದ್ದಾರೆ.

ಭಾನುವಾರ ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ, `ಇನ್ನೂ ಹೆಬ್ಬಾಳ ಕ್ಷೇತ್ರದ ಟಿಕೆಟ್ ಘೋಷಣೆ ಆಗಿಲ್ಲ. ಅಬ್ದುಲ್ ರೆಹಮಾನ್ ಷರೀಫ್‌ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ದೀರ್ಘಕಾಲ ಪಕ್ಷಕ್ಕಾಗಿ ದುಡಿದ ನನ್ನನ್ನು ಕಡೆಗಣಿಸಿ ಎಳೆಯ ಹುಡುಗನಿಗೆ ಟಿಕೆಟ್ ನೀಡಲು ಮುಂದಾಗಿರುವುದು ಬೇಸರ ತಂದಿದೆ' ಎಂದಿದ್ದಾರೆ.

ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೇಂದ್ರ ಸಚಿವ ಎಂ.ವೀರಪ್ಪಮೊಯಿಲಿ ಮತ್ತಿತರರು ತನ್ನ ಸೇವೆಯನ್ನು ಗುರುತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರೇವಣ್ಣ, ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರೇವಣ್ಣ ಅವರ ಬೆಂಬಲಿಗರು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾನಗರದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಮತ್ತಷ್ಟು ಕಗ್ಗಂಟು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯ ಮುನಿರತ್ನ, ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಪಿ.ಎನ್.ಕೃಷ್ಣಮೂರ್ತಿ ಮತ್ತು ಸ್ಥಳೀಯ ಮುಖಂಡ ಹನುಮಂತರಾಯಪ್ಪ ನಡುವೆ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಇದೆ. ಕೃಷ್ಣಮೂರ್ತಿ ಕೊರಟಗೆರೆಯವರು. ಅವರಿಗೆ ಟಿಕೆಟ್ ಕೈತಪ್ಪಿದರೆ ತಮಗೆ (ಕೊರಟಗೆರೆಯಲ್ಲಿ) ಹಿನ್ನಡೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು.

ಪರಮೇಶ್ವರ್ ಪತ್ರ ಬಹಿರಂಗವಾದ ಬಳಿಕ ಮತ್ತಷ್ಟು ಬೆಳವಣಿಗೆಗಳು ನಡೆದಿವೆ. ಯಾರಿಗೆ ಟಿಕೆಟ್ ನೀಡಿದರೂ ಉಳಿದವರು ಬಂಡಾಯ ಏಳಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿದ್ದರೂ, ಭೀತಿ ಮಾಯವಾಗಿಲ್ಲ. ಈ ಕಾರಣಕ್ಕಾಗಿಯೇ ಈ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ಎರಡನೇ ಪಟ್ಟಿಯಲ್ಲೂ ಖಚಿತವಾಗಿಲ್ಲ.

ಮೊದಲ ಪಟ್ಟಿ ಪ್ರಕಟವಾದಾಗ ನಗರದ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿರಲಿಲ್ಲ. ಈ ಪೈಕಿ ಎಂಟು ಕ್ಷೇತ್ರಗಳಿಗೆ ಈಗ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಸ್ಥಳೀಯರ ಪ್ರಬಲ ವಿರೋಧದ ನಡುವೆಯೂ ಮಾಜಿ ಸಂಸದೆ ತೇಜಸ್ವಿನಿಗೌಡ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಘೋಷಿಸಲಾಗಿದೆ.

ಕೆ.ಆರ್.ಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ಕೈತಪ್ಪಿದೆ. ಪಾಲಿಕೆ ಸದಸ್ಯ ಬಿ.ಎ.ಬಸವರಾಜು ಅವರಿಗೆ ಟಿಕೆಟ್ ನೀಡಲಾಗಿದೆ. ನಾಯಕರ ಮೇಲೆ ಒತ್ತಡ ಹೇರಲು ದೆಹಲಿಗೆ ತೆರಳಿದ್ದ ಕೃಷ್ಣಪ್ಪ ಭಾನುವಾರ ರಾತ್ರಿ ವಾಪಸಾಗಲಿದ್ದಾರೆ. ಮುಂದಿನ ನಡೆ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ. ಸೋಮವಾರ ಬೆಳಿಗ್ಗೆ ಬೆಂಬಲಿಗರ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.