ADVERTISEMENT

ಬಂಧಿತ ಆರೋಪಿ 13 ವರ್ಷದ ಬಾಲಕ!

ನೂತನ ಲೇಔಟ್‌ನಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 20:08 IST
Last Updated 7 ಜನವರಿ 2014, 20:08 IST

ಬೆಂಗಳೂರು: ಬೇಗೂರು ರಸ್ತೆಯ ನೂತನ ಲೇಔಟ್‌ನಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ನಗರ ಪೊಲೀಸರು 13 ವರ್ಷದ ಬಾಲಕ­ನನ್ನು ಬಂಧಿಸಿದ್ದಾರೆ. ಆತ ಅತ್ಯಾಚಾರ ಎಸಗಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

‘ಆರೋಪಿಯ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಟಿ.ಡಿ.ಪವಾರ್‌ ನೇತೃತ್ವದಲ್ಲಿ ಸಿಸಿಬಿ ಪೊಲೀಸರನ್ನು ಒಳಗೊಂಡಂತೆ ಒಂಬತ್ತು ತಂಡಗಳನ್ನು ರಚಿಸಲಾಗಿತ್ತು. ಸಿಬ್ಬಂದಿ ಹಗಲಿರುಳು ಕಾರ್ಯಾಚರಣೆ ನಡೆಸಿ ಮಂಗಳವಾರ ನಸುಕಿನಲ್ಲಿ ಆರೋಪಿಯನ್ನು ಬಂಧಿಸು­ವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಪ್ರಶಂಸೆ ವ್ಯಕ್ತಪಡಿಸಿದರು.

‘ಶನಿವಾರ (ಜ.4) ಮಧ್ಯಾಹ್ನ ಶಾಲೆ­ಯಿಂದ ಮನೆಗೆ ನಡೆದು ಹೋಗುತ್ತಿದ್ದ ಒಂಬತ್ತು ವರ್ಷದ ಬಾಲಕಿಯನ್ನು ಹಿಂಬಾಲಿಸಿದ ಆರೋಪಿ ಬಾಲಕ, ಮುಖದ ಮೇಲೆ ಟವೆಲ್‌ ಹಾಕಿ ಆಕೆಯನ್ನು ಸಮೀಪದ ಶೆಡ್‌ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಅಸ್ವಸ್ಥಗೊಂಡ ಬಾಲಕಿ, ಮನೆಗೆ ಹೋಗಿ ಅಜ್ಜಿ ಬಳಿ ಘಟನೆ ಬಗ್ಗೆ ವಿವರಿಸಿದ್ದಳು. ಆಕೆಯ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು’ ಎಂದು ಔರಾದಕರ್‌ ತಿಳಿಸಿದರು.

‘ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಗೆ ವೈದ್ಯರು ಅರಿವಳಿಕೆ ನೀಡಿದ್ದರಿಂದ ಆಕೆ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಯಾವುದೇ ಸುಳಿವಿಲ್ಲದೆ ಆರೋ­ಪಿಯ ಬಂಧನ ಸವಾಲಾಗಿ ಪರಿ­ಣಮಿ­ಸಿತ್ತು. ಬಾಲಕಿಯ ಪೋಷಕರು ನೀಡಿದ ಹೇಳಿಕೆಗಳನ್ನೇ ಆಧಾರ­ವಾಗಿಟ್ಟುಕೊಂಡು ಘಟನಾ ಸ್ಥಳದ ಹುಡುಕಾಟ ಆರಂಭಿಸಿದೆವು’ ಎಂದು ಹೇಳಿದರು.

ಚಪ್ಪಲಿಯಿಂದ ಸುಳಿವು: ಬಾಲಕಿಯ ಮನೆಯಿಂದ ಎರಡು ಕಿಲೋ ಮೀಟರ್‌ ದೂರದಲ್ಲಿ ಶಾಲೆ ಇದೆ. ಈ ಅಂತರ­ದಲ್ಲಿ ಅತ್ಯಾಚಾರ ನಡೆದ ಸ್ಥಳದ ಹುಡು­ಕಾಟ ಆರಂಭವಾಯಿತು. ಆಗ ನೂತನಲೇಔಟ್‌ನ ಶೆಡ್‌ ಬಳಿ ಹೋದಾಗ ಚಪ್ಪಲಿ, ಬಟ್ಟೆಯ ಪಿನ್‌ ಮತ್ತಿತರ ವಸ್ತುಗಳು ಪತ್ತೆಯಾದವು. ಅವು­ಗಳನ್ನು ವಶಕ್ಕೆ ಪಡೆದು ಆ ಗಾತ್ರದ ಚಪ್ಪಲಿ ಹಾಕುವ ಸ್ಥಳೀಯರನ್ನು ಗುರುತಿಸಿ ವಿಚಾರಣೆಗೆ ಒಳಪಡಿಸ­ಲಾಯಿತು. ಈ ಹಂತದಲ್ಲಿ ಶಾಲಾ–ಕಾಲೇಜು ಬಿಟ್ಟಿರುವ ಹುಡುಗರು ಹಾಗೂ ನಿರುದ್ಯೋಗಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಬಾಲಕ  ಸಿಕ್ಕಿ ಬಿದ್ದ ಎಂದು ತನಿಖಾಧಿ­ಕಾರಿಗಳು ಹೇಳಿದರು.

‘ನೂತನ ಲೇಔಟ್‌ ಮಾರ್ಗವಾಗಿ ಬಾಲಕಿ ಶಾಲೆಗೆ ಹೋಗಿ ಬರುವುದನ್ನು ಗಮನಿಸಿದ್ದ ಆರೋಪಿ ಬಾಲಕ, ಆಕೆ ಮೇಲೆ ಅತ್ಯಾಚಾರ ಎಸಗಲು ಹಲವು ದಿನಗಳಿಂದ ಸಂಚು ರೂಪಿಸಿದ್ದ. ಆದರೆ, ಇತ್ತೀಚೆಗೆ ಬಾಲಕಿಯನ್ನು ಆಕೆಯ ತಂದೆಯೇ ಶಾಲೆಗೆ ಬಿಡುತ್ತಿದ್ದರಿಂದ ಹಾಗೂ ಅವರೇ ವಾಪಸ್‌ ಮನೆಗೆ ಕರೆದುಕೊಂಡು ಬರುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಶನಿವಾರ ಬೆಳಗಿನ ತರಗತಿ ಇದ್ದ ಕಾರಣ ಬಾಲಕಿ ಒಬ್ಬಳೇ ಬರುತ್ತಾಳೆ ಎಂಬುದನ್ನು ಅರಿತುಕೊಂಡ ಆತ, ಆ ಮಾರ್ಗ­ದಲ್ಲಿ­ರುವ ಶೆಡ್‌ವೊಂದರ ಬಳಿ ಕಾದು ಕೃತ್ಯ ಎಸಗಿದ್ದ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಟಿ.ಡಿ.ಪವಾರ್ ತಿಳಿಸಿದರು.

‘ಬಾಲಕನ ವಿರುದ್ಧ ಅಪಹರಣ, ಅತ್ಯಾಚಾರ, ಕೊಲೆ ಯತ್ನ, ಬೆದರಿಕೆ ಆರೋಪದಡಿ ಪ್ರಕರಣ ದಾಖಲಿ­ಸಲಾಗಿದೆ. ಜತೆಗೆ ‘ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ –2012’ರ ಅಡಿ ಪ್ರಕರಣ ದಾಖಲಿ­ಸಿಕೊಂಡು ಬಾಲ ನ್ಯಾಯ­ಮಂಡಳಿಯ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಯಿಯ ಶಂಕೆ ನಿಜವಾಯಿತು
‘ಪತಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ. ನಾನು ಸಿದ್ಧ ಉಡುಪು ಕಾರ್ಖಾನೆಗೆ ಹೋಗುತ್ತೇನೆ. ಎಂಟನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಮಗ, ನಂತರ ಶಿಕ್ಷಣವನ್ನು ಮುಂದುವರಿಸದೆ ಬೀದಿ ಸುತ್ತುತ್ತಿದ್ದ. ಸಹವಾಸ ದೋಷದಿಂದ ಕೆಟ್ಟು ಹೋಗಿರುವ ಆತ, ಈ ಕೃತ್ಯದಲ್ಲಿ ಭಾಗಿಯಾಗಿರಬಹುದು’ ಎಂದು ಬಾಲಕನ ತಾಯಿಯೇ ಶಂಕೆ ವ್ಯಕ್ತಪಡಿಸಿದ್ದರು. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರ ಅನುಮಾನ ನಿಜವಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಸಿ.ಸಿ ಟಿ.ವಿ ದೃಶ್ಯ ಅಸ್ಪಷ್ಟ
ಬಾಲಕಿ ಶಾಲೆಯಿಂದ ಬರುತ್ತಿರುವ ಹಾಗೂ ಬಾಲಕನೊಬ್ಬ ಆಕೆಯನ್ನು ಹಿಂಬಾಲಿಸುತ್ತಿರುವ ದೃಶ್ಯ ಸಮೀಪದ ಜೆ.ಪಿ ಕಲ್ಯಾಣ ಮಂಟಪದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ  ದಾಖಲಾಗಿತ್ತು. ಆ ದೃಶ್ಯ ಅಸ್ಪಷ್ಟವಾಗಿತ್ತು. ಬಾಲಕ ಕಪ್ಪು ಬಣ್ಣದ ಜಾಕೇಟ್‌ ತೊಟ್ಟಿದ್ದ. ಆ ಜಾಕೇಟ್‌ ಇದೀಗ ಬಾಲಕನ ಮನೆಯಲ್ಲಿ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಸ್ನೇಹಿತನ ಮೊಬೈಲ್‌ನಲ್ಲಿ ನೀಲಿ ಚಿತ್ರ ನೋಡಿ, ಪ್ರಚೋದನೆಗೊಂಡು ಈ ಕೃತ್ಯ ಎಸಗಿದೆ’ ಎಂದು ಬಾಲಕ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT