ADVERTISEMENT

ಬಗರ್‌ಹುಕುಂ ಹಕ್ಕುಪತ್ರಕ್ಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಬೆಂಗಳೂರು: ‘ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಇದೇ 10ರಿಂದ 12ರವರೆಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಹಕ್ಕುಪತ್ರ ದೊರೆಯುವವರೆಗೂ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಾಗುವುದು’ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಜಿ.ಎನ್.ರಾಜಶೇಖರ ನಾಯ್ಡು ‘ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ದೊಡ್ಡ ಹೋರಾಟ ನಡೆಸಿದ್ದರು. ಆದರೆ ಈಗ ಅವರೇ ಅಧಿಕಾರದಲ್ಲಿದ್ದರೂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ’ ಎಂದು ಹೇಳಿದರು.

‘ಉಳುವವನೇ ಭೂಮಿಯ ಒಡೆಯ ಎಂಬ ಸೌಲಭ್ಯ ಬಗರ್‌ಹುಕುಂ ಸಾಗುವಳಿದಾರರಿಗೆ ದೊರೆಯುತ್ತಿಲ್ಲ. ಸುಮಾರು 27 ಲಕ್ಷ ರೈತರು ಬಗರ್ ಹುಕುಂ ಚಳವಳಿ ನಡೆಸುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾವಿರಾರು ಎಕರೆ ಜಮೀನು ಒದಗಿಸುವ ಸರ್ಕಾರ ರೈತರನ್ನು ನಿರ್ಲಕ್ಷಿಸಿದೆ’ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ ‘ಬಗರ್ ಹುಕುಂ ಎಂಬ ಪದದ ಅರ್ಥವೇ ತಪ್ಪು. ರೈತರು ಹಲವು ವರ್ಷಗಳಿಂದ ಸಾಗುವಳಿ ನಡೆಸುತ್ತಿರುವ ಭೂಮಿಗೆ ಹಕ್ಕು ಪತ್ರ ನೀಡುವುದು ಸರ್ಕಾರದ ಕರ್ತವ್ಯವಾಗಿದೆ’ ಎಂದರು.

ನೈಸ್ ಭೂಮಿಗಾಗಿ ವಶಪಡಿಸಿಕೊಂಡ ಸಾವಿರಾರು ಎಕರೆ ಜಮೀನಿನಲ್ಲಿ ಬಹುಪಾಲು ಜಮೀನು ಬಗರ್ ಹುಕುಂ ರೈತರಿಗೆ ಸೇರಿದ್ದಾಗಿದೆ. ಇಂತಹ ಅಕ್ರಮಗಳನ್ನು ಸರ್ಕಾರ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.