ADVERTISEMENT

ಬಡ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ

ಬಿಬಿಎಂಪಿ- ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 20:05 IST
Last Updated 22 ಡಿಸೆಂಬರ್ 2012, 20:05 IST

ಬೆಂಗಳೂರು: ಆರ್ಥಿಕವಾಗಿ ದುರ್ಬಲವಾಗಿರುವ ನಗರದ ಹತ್ತು ಲಕ್ಷ ಜನರಿಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಆರೋಗ್ಯ ಸೇವೆಯನ್ನು ಕಲ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶುಕ್ರವಾರ ರಾಜ್ಯ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜೊತೆ ಒಪ್ಪಂದ ಮಾಡಿಕೊಂಡಿತು.

ಯೋಜನೆಗೆ ಪ್ರಾರಂಭಿಕ ಠೇವಣಿಯಾಗಿ ಒಂದು ಕೋಟಿ ರೂಪಾಯಿಯನ್ನು ಮೇಯರ್ ಡಿ.ವೆಂಕಟೇಶಮೂರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಹಸ್ತಾಂತರಿಸಿದರು.

ಕೊಳಚೆ ಪ್ರದೇಶದಲ್ಲಿ ವಾಸವಾಗಿರುವ ಏಳು ಲಕ್ಷ ಜನ ಮತ್ತು ಮೂರು ಲಕ್ಷ ಆಟೊ ಚಾಲಕರು ಈ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಗುತ್ತಿಗೆ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ವಿಕಲಚೇತನರು ಮತ್ತು ವಿಧವೆಯರಿಗೆ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ.

ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ, ಸುಟ್ಟ ಗಾಯ, ಅಪಘಾತ, ನವಜಾತ ಶಿಶುಗಳ ಕಾಯಿಲೆಗಳಿಗೆ ಸಂಬಂಧಿಸಿದಂತೆ 402 ವಿಧದ ಶಸ್ತ್ರ ಚಿಕಿತ್ಸೆ ಸೌಲಭ್ಯ ಸಿಗಲಿದೆ.

ಪಾಲಿಕೆಯು ಈ ಯೋಜನೆ ಅಡಿಯಲ್ಲಿ ಸುಮಾರು 2.7 ಲಕ್ಷ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದವರನ್ನು ಗುರುತಿಸಲಾಗಿದ್ದು, ಈಗಾಗಲೇ 55 ಸಾವಿರ ಕುಟುಂಬದವರಿಗೆ ಬಯೋಮೆಟ್ರಿಕ್ ಗುರುತಿನ ಚೀಟಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಕುಟುಂಬದವರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ಪ್ರತಿ ಕುಟುಂಬದವರು ವಾರ್ಷಿಕವಾಗಿ ಗರಿಷ್ಠ ರೂ 2 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯ ಪಡೆಯಬಹುದು ಎಂದು ಮೇಯರ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮದನಗೋಪಾಲ್, ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಬೋರೇಗೌಡ, ಬಿಬಿಎಂಪಿ ಸದಸ್ಯರಾದ ಬಿ.ವಿ. ಗಣೇಶ್, ಗಂಗಭೈರಯ್ಯ, ಆರೋಗ್ಯಾಧಿಕಾರಿ ಡಾ.ಎಸ್.ಬಿ. ನಾಗರಾಜ್, ಯೋಜನಾ ಸಮನ್ವಯಾಧಿಕಾರಿ ಡಾ.ಸುರೇಶ್ ಜಿ.ಕೆ. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.