ADVERTISEMENT

ಬಣ್ಣ ಬದಲಿಸುವ, ಬೆಳಕು ಸೂಸುವ ಸೀರೆ...

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೆಂಗಳೂರು: ಹಸಿರು ಹಳದಿಯ ರೇಷ್ಮೆ ಸೀರೆ ಮೇಲೆ ಮಿಂಚುಹುಳುಗಳು ಅವಿತಿವೆಯೇನೋ ಎಂಬಂತೆ ಮಿಣುಕು ಬೆಳಕು. ಅದರ ಬದಿಗೆ ಸಂಪಿಗೆಯಿಂದಲೇ ನೇಯ್ದಂತೆ ಘಮಗುಡುವ ಪರಿಮಳದ ಸೀರೆ. ಮತ್ತೊಂದಕ್ಕೆ ಶ್ರೀಗಂಧದ ನೂಲಿನ ಹೆಣಿಗೆ. ಈ ಎಲ್ಲವುಗಳ ವೆುರುಗು ಹೆಚ್ಚಿಸುವಂತೆ ಬಣ್ಣ ಬದಲಿಸುವ ಬ್ರಹ್ಮ ಕಮಲ ಸೀರೆ...

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರೇಷ್ಮೆ ಉತ್ಸವದಲ್ಲಿ ಗುರುವಾರ ಸೀರೆಗಳ ದಶಾವತಾರ. ಒಟ್ಟು ನಾಲ್ವರು ವಿನ್ಯಾಸಕಾರರು ಸಿದ್ಧಪಡಿಸಿದ ಸೀರೆಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು.

ಆಧುನಿಕ ತಂತ್ರಜ್ಞಾನ ಬಳಸಿದ ಒಂಬತ್ತು ಸೀರೆಗಳನ್ನು ಆಂಧ್ರಪ್ರದೇಶದ ಧರ್ಮಾವರಂನ ನೇಕಾರ, ಪೆದ್ದಯ್ಯಗಾರಿ ಮೋಹನ್ ಅವರು ವಿನ್ಯಾಸಗೊಳಿಸಿದ್ದಾರೆ. ಇವರು ತಯಾರಿಸಿದ ಬೆಳಕು ಸೂಸುವ ಸೀರೆಯಲ್ಲಿ 20ಕ್ಕೂ ಹೆಚ್ಚು ಎಲ್‌ಇಡಿ ಬಲ್ಬ್‌ಗಳನ್ನು ಸೂಕ್ಷ್ಮವಾಗಿ ನೇಯಲಾಗಿದೆ. ನೀರೆಯರು ಸೆರಗಿನಲ್ಲಿರುವ ಸ್ವಿಚ್ ಒತ್ತಿದರೆ ಬೇಕೆಂದಾಗ ಬೆಳಕು ಹೊರಹೊಮ್ಮುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 2 ಗಂಟೆಗೂ ಹೆಚ್ಚು ಕಾಲ ಸೀರೆ ಬೆಳಕು ಬೀರುತ್ತದೆ.

ಇದಲ್ಲದೆ ಗಂಧದ ನಾರಿನಿಂದ ನೇಯ್ದ, ಸಂಪಿಗೆ ಸುಗಂಧ ದ್ರವ್ಯದಲ್ಲಿ ಅದ್ದಿ ತೆಗೆದ ಸೀರೆಗಳು, 1844 ಹೂಗಳು ಹಾಗೂ 230 ಪುಷ್ಪದಳಗಳನ್ನು ಹೊಂದಿದ ಸೀರೆ, ಅಮೆರಿಕನ್ ವಜ್ರ, ಮಾಣಿಕ್ಯ, ಮುತ್ತುಗಳಿಂದ ಅಲಂಕರಿಸಿದ ಅಶೋಕ ಧರ್ಮಚಕ್ರದ ಚಿತ್ತಾರ ಇರುವ ಸೀರೆ, ಹಗಲಿನಲ್ಲಿ ಒಂದು ಬಣ್ಣ ಇರುಳಿನಲ್ಲಿ ಮತ್ತೊಂದು ಬಣ್ಣ ಸೂಸುವ ಬ್ರಹ್ಮ ಕಮಲದ ವಿನ್ಯಾಸವುಳ್ಳ ಸೀರೆ ಹೀಗೆ ಇವರ ಕಲ್ಪನೆಯಲ್ಲಿ ಅರಳಿದ ಸುಮಾರು ಹತ್ತು ಸೀರೆಗಳನ್ನು ಪ್ರದರ್ಶಿಸಲಾಯಿತು. ಇವುಗಳಿಗೆ ಮಾರುಕಟ್ಟೆಯಲ್ಲಿ 15 ಸಾವಿರದಿಂದ 30 ಸಾವಿರದವರೆಗೆ ಬೆಲೆ ಇದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್, `ಹೊಸ ಅನ್ವೇಷಣೆಗಳಿಲ್ಲದೆ ಹೋದರೆ ಜನರನ್ನು ಆಕರ್ಷಿಸುವುದು ಸಾಧ್ಯವಿಲ್ಲ. ಇದಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯ ಇದೆ. ಶ್ರಮ ಪಟ್ಟರೆ ಸಾಧನೆ ಸಾಧ್ಯ ಎಂಬ ನಂಬಿಕೆ ನನ್ನದು. ಇಲ್ಲಿ ಪ್ರದರ್ಶಿಸಲಾದ ಬಹುತೇಕ ಸೀರೆಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.